ಇಸ್ರೇಲ್ ಅನ್ನು ಕ್ಷಿಪಣಿ ದಾಳಿಯಿಂದ ರಕ್ಷಿಸಲು ಸೇನೆಯ ಬಳಿ ಪರ್ಯಾಪ್ತ ಸಂಪನ್ಮೂಲಗಳಿಲ್ಲ: ಅಮೆರಿಕದ ಉನ್ನತ ಕಮಾಂಡರ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : magnific.com
ವಾಶಿಂಗ್ಟನ್: ಇಸ್ರೇಲ್ ಮೇಲೆ ನಡೆಯುತ್ತಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳಿಂದ ಅದನ್ನು ನಿರಂತರವಾಗಿ ರಕ್ಷಿಸಲು ಅಮೆರಿಕನ್ ಮಿಲಿಟರಿ ಬಳಿ ಸಾಕಷ್ಟು ಸಂಪನ್ಮೂಲಗಳಿಲ್ಲ ಎಂದು ಯುರೋಪ್ನಲ್ಲಿರುವ ಅಮೆರಿಕ ಪಡೆಗಳ ಉನ್ನತ ಕಮಾಂಡರ್ ಪೆಂಟ್ಗಾನ್ಗೆ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸುವ ಕ್ಷಿಪಣಿ ದಾಳಿಗಳನ್ನು ತಡೆಯುವ ಕಾರ್ಯಾಚರಣೆಯನ್ನು ಮುಂದುವರಿಸಲು ಅಮೆರಿಕದ ಬಳಿ ಅಗತ್ಯ ಸಂಪನ್ಮೂಲಗಳ ಕೊರತೆಯಿದೆ. ತಮ್ಮ ಕಮಾಂಡ್ ಅಡಿಯಲ್ಲಿ ಅಮೆರಿಕ ನೌಕಾಪಡೆಯ ಮತ್ತೊಂದು ಯುದ್ಧನೌಕೆಯನ್ನು ನಿಯೋಜಿಸುವ ತುರ್ತು ಅಗತ್ಯವಿದೆ ಎಂದು ಅಮೆರಿಕದ ಯುರೋಪಿಯನ್ ಕಮಾಂಡ್ನ (ಇಯುಕಾಮ್) ಮುಖ್ಯಸ್ಥ ಜನರಲ್ ಅಲೆಕ್ಸಸ್ ಗ್ರಿಂಕೆವಿಚ್ ಈ ವಾರದ ಆರಂಭದಲ್ಲಿ ಪೆಂಟ್ಗಾನ್ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು `ದಿ ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
`ಇಯುಕಾಮ್' ಯುರೋಪ್ ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳ ಉಸ್ತುವಾರಿ ವಹಿಸುತ್ತದೆ. ಇಲ್ಲಿ ಅಮೆರಿಕದ ಯುದ್ಧನೌಕೆಗಳು ಇರಾನ್ ಹಾಗೂ ಯೆಮನ್ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಇಸ್ರೇಲ್ ಮೇಲೆ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಕೆಲಸ ಮಾಡುತ್ತಿವೆ.




