ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಮತ್ತಷ್ಟು ಸುಂಕ: ಸುಳಿವು ನೀಡಿದ ಅಮೆರಿಕ

PC: x.com/JavanshirValiye
ವಾಷಿಂಗ್ಟನ್: ರಷ್ಯಾ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಅಮೆರಿಕ ಜತೆ ಕೈಜೋಡಿಸುವಂತೆ ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳಿಗೆ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಆಗ್ರಹಿಸಿದ್ದಾರೆ. ಜತೆಗೆ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಮತ್ತಷ್ಟು ಸುಂಕ ವಿಧಿಸುವ ಸುಳಿವು ನೀಡಿದ್ದಾರೆ.
ರಷ್ಯಾ ಜತೆಗಿನ ತೈಲ ವ್ಯವಹಾರದ ಹಿನ್ನೆಲೆಯಲ್ಲಿ ಭಾರತದ ಮೇಲೆ ಈಗಾಗಲೇ ಟ್ರಂಪ್ ಆಡಳಿತ ಶೇಕಡ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದು, ಉಕ್ರೇನ್ ಜತೆಗಿನ ಯುದ್ಧಕ್ಕೆ ರಷ್ಯಾಗೆ ಇದು ಪರೋಕ್ಷವಾಗಿ ಹಣಕಾಸು ನೆರವು ನೀಡಿದಂತೆ ಎಂದು ಹೇಳಿದ್ದಾರೆ.
ಉಕ್ರೇನ್ ಜತೆಗಿನ ಸಂಘರ್ಷದ ಅವಧಿಯಲ್ಲಿ ರಷ್ಯಾದಿಂದ ಭಾರತ ನಿರಂತರವಾಗಿ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತ ಭಾರತದ ಮೇಲೆ ವಿಧಿಸಿರುವ ಒಟ್ಟು ಸುಂಕ ಇದೀಗ ಶೇಕಡ 50ರಷ್ಟಾಗಿದ್ದು, ಜಗತ್ತಿನ ಯಾವುದೇ ದೇಶಗಳ ಮೇಲೆ ಅಮೆರಿಕ ವಿಧಿಸಿರುವ ಗರಿಷ್ಠ ಸುಂಕ ಇದಾಗಿದೆ.
ರಷ್ಯಾದಿಂದ ತೈಲ ಖರೀದಿಸುತ್ತಿರುವ ರಾಷ್ಟ್ರಗಳನ್ನು ಗುರಿ ಮಾಡಿ ಹೆಚ್ಚುವರಿ ಸುಂಕ ಮತ್ತು ಆರ್ಥಿಕ ನಿರ್ಬಂಧ ವಿಧಿಸುವ ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಯೂರೋಪಿಯನ್ ಒಕ್ಕೂಟದ ದೇಶಗಳ ಜತೆ ಸಹಭಾಗಿತ್ವ ಹೊಂದಲು ಸಿದ್ಧವಿದೆ ಎಂದು ಬೆಸೆಂಟ್ ಸುಳಿವು ನೀಡಿದ್ದಾಗಿ ಎನ್ಬಿಸಿ ನ್ಯೂಸ್ ವರದಿ ಮಾಡಿದೆ. ರಷ್ಯಾ ಮೇಲೆ ಒತ್ತಡ ಹೆಚ್ಚಿಸಲು ನಾವು ಸಜ್ಜಾಗಿದ್ದೇವೆ. ಆದರೆ ನಮ್ಮ ಯೂರೋಪಿಯನ್ ಪಾಲುದಾರರು ಇದನ್ನು ಅನುಸರಿಸುವ ಅಗತ್ಯವಿದೆ ಎಂದು ಎನ್ಬಿಸಿ ನ್ಯೂಸ್ ಜತೆ ಮಾತನಾಡಿದ ಬೆಸೆಂಟ್ ಹೇಳಿದ್ದಾರೆ.
ಅಮೆರಿಕ ಮತ್ತು ಯೂರೋಪಿಯನ್ ಒಕ್ಕೂಟ ಜತೆಯಾದರೆ ಹೆಚ್ಚು ನಿರ್ಬಂಧಗಳನ್ನು, ಪೂರಕ ಸುಂಕಗಳನ್ನು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ವಿಧಿಸಲು ಸಾಧ್ಯ. ಆಗ ರಷ್ಯದ ಆರ್ಥಿಕತೆ ಸಂಪೂರ್ಣ ಕುಸಿಯುತ್ತದೆ. ಆಗ ರಷ್ಯಾದ ಅಧ್ಯಕ್ಷ ಪುಟಿನ್ ಸಂಧಾನ ಮಾತುಕತೆಗೆ ಬರುತ್ತಾರೆ ಎಂದು ಬೆಸೆಂಟ್ ಅಭಿಪ್ರಾಯಪಟ್ಟಿದ್ದಾರೆ.







