ಗ್ರಾಹಕರೊಬ್ಬರ ಖಾಸಗಿ ಫೋಟೊಗಳನ್ನು ತನ್ನ ಫೋನ್ ಗೆ ವರ್ಗಾಯಿಸಲು ಯತ್ನ: ಭಾರತೀಯ ಮೂಲದ ವ್ಯಕ್ತಿ ಅಮೆರಿಕದ ವಲಸೆ ಅಧಿಕಾರಿಗಳ ವಶಕ್ಕೆ

Photo: TOI
ವಾಷಿಂಗ್ಟನ್: ಗ್ರಾಹಕರೊಬ್ಬರ ಮೊಬೈಲ್ ನಲ್ಲಿದ್ದ ಖಾಸಗಿ ಹಾಗೂ ನಗ್ನ ಚಿತ್ರಗಳನ್ನು ಆಕೆಯ ಅನುಮತಿಯಿಲ್ಲದೆ ತನ್ನ ಮೊಬೈಲ್ ಗೆ ವರ್ಗಾಯಿಸಲು ಯತ್ನಿಸಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ವಿಭಾಗ (ICE) ವಶಕ್ಕೆ ಪಡೆದಿದೆ.
ಟೆಕ್ಸಾಸ್ ನ ರಾಘುಲ್ ಆನಂದಕೃಷ್ಣನ್ (29) ಬಂಧನಕ್ಕೊಳಗಾದ ಆರೋಪಿ. ಟೆಕ್ಸಾಸ್ನ ಕೌಂಟಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಆತನನ್ನು ICE ವಶಕ್ಕೆ ಪಡೆದಿದ್ದು, ವಲಸೆ ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವವರೆಗೆ ಬಂಧನದಲ್ಲಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಜೂನ್ 7ರಂದು ಆಸ್ಟಿನ್ನ ಕ್ಯಾಪಿಟಲ್ ಪ್ಲಾಜಾ ಶಾಪಿಂಗ್ ಸೆಂಟರ್ನಲ್ಲಿರುವ ‘ಟೋಟಲ್ ವೈರ್ಲೆಸ್’ ಮಳಿಗೆಯಲ್ಲಿ ನಡೆದಿತ್ತು. ತನ್ನ ಐಫೋನ್ನ ನೆಟ್ವರ್ಕ್ ಸೆಟ್ಟಿಂಗ್ ಬದಲಾಯಿಸಿಕೊಳ್ಳಲು ಬಂದಿದ್ದ ಮಹಿಳೆಯ ಮೊಬೈಲ್ ಪರಿಶೀಲಿಸುವ ನೆಪದಲ್ಲಿ ರಾಘುಲ್ ಆಕೆಯ ಪಾಸ್ಕೋಡ್ ಪಡೆದುಕೊಂಡಿದ್ದ.
ಮೊಬೈಲ್ ನ ನೆಟ್ವರ್ಕ್ ಸೆಟ್ಟಿಂಗ್ ಬದಲಾಯಿಸಲು ಮಾತ್ರ ಅನುಮತಿ ಪಡೆದಿದ್ದ ಆತ, ಫೋನ್ನಲ್ಲಿದ್ದ ಫೋಟೊ ಗ್ಯಾಲರಿ ತೆರೆದು ಎರಡು ನಗ್ನ ಚಿತ್ರಗಳನ್ನು ಆಪಲ್ ನ ಏರ್ಡ್ರಾಪ್ ವ್ಯವಸ್ಥೆಯ ಮೂಲಕ ತನ್ನ ಮೊಬೈಲ್ ಗೆ ಕಳುಹಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ, ಚಿತ್ರಗಳ ವರ್ಗಾವಣೆ ಪೂರ್ಣಗೊಂಡಿರಲಿಲ್ಲ ಎಂದು ಹೇಳಿದ್ದಾನೆ.
ಮಳಿಗೆಯಿಂದ ಹೊರಬಂದ ಬಳಿಕ ಮಹಿಳೆ ತನ್ನ ಮೊಬೈಲ್ ಪರಿಶೀಲಿಸಿದಾಗ, ತನ್ನ ಎರಡು ಖಾಸಗಿ ಚಿತ್ರಗಳನ್ನು ರಾಘುಲ್ ಗೆ ಏರ್ಡ್ರಾಪ್ ಮೂಲಕ ಕಳುಹಿಸಲು ಪ್ರಯತ್ನಿಸಿರುವುದು ಗಮನಕ್ಕೆ ಬಂದಿತ್ತು ಎಂದು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಆತ ತನ್ನ ಸ್ನ್ಯಾಪ್ಚಾಟ್ ಖಾತೆಯನ್ನೂ ತೆರೆದು ತನ್ನನ್ನೇ ಸ್ನೇಹಿತರ ಪಟ್ಟಿಗೆ ಸೇರಿಸಿಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ತನ್ನ ಖಾಸಗಿ ಚಿತ್ರಗಳು ಹಾಗೂ ಖಾತೆಯನ್ನು ಪರಿಶೀಲಿಸಲು ಯಾವುದೇ ಅನುಮತಿ ನೀಡಿರಲಿಲ್ಲ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದರು.
ಈ ಪ್ರಕರಣದಲ್ಲಿ ರಾಘುಲ್ ವಿರುದ್ಧ ಅನುಮತಿಯಿಲ್ಲದೆ ಖಾಸಗಿ ದೃಶ್ಯಗಳನ್ನು ದಾಖಲಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯಾಗಿದ್ದು, ಕೌಂಟಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾನೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿನ ಶಿಕ್ಷೆ ಪೂರ್ಣಗೊಂಡ ಬಳಿಕ ICE ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನ ವಲಸೆ ಸಂಬಂಧಿತ ವಿಚಾರಣೆ ಬಾಕಿ ಇದ್ದು, ಮುಂದಿನ ಕ್ರಮಗಳ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.






