ಅಮೆರಿಕ-ಇರಾನ್ ಶಾಂತಿ ಒಪ್ಪಂದದ 60 ದಿನಗಳ ಗಡುವು ಅಂತ್ಯ

ಸಾಂದರ್ಭಿಕ ಚಿತ್ರ (AI)
ಟೆಹರಾನ್, ಆ.17: ಈಗಾಗಲೇ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಅಮೆರಿಕ-ಇರಾನ್ ಒಪ್ಪಂದದ 60 ದಿನಗಳ ಗಡುವು ಆಗಸ್ಟ್ 17ರಂದು (ಸೋಮವಾರ) ಮುಕ್ತಾಯಗೊಂಡಿದ್ದು ಈ ಗಡುವನ್ನು ವಿಸ್ತರಿಸಲು ಅಮೆರಿಕ ಹಾಗೂ ಇರಾನ್ ಎರಡೂ ಕಡೆಯಿಂದಲೂ ಯಾವುದೇ ಆಸಕ್ತಿ ಕಂಡುಬರುತ್ತಿಲ್ಲ.
ಅಮೆರಿಕದೊಂದಿಗೆ ಮಾತುಕತೆಯನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಇರಾನ್ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಈ ವಾರಾಂತ್ಯದಲ್ಲಿ ಹೇಳಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಒತ್ತಡ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದು ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕದ ನಿಯಂತ್ರಣವನ್ನು ಸಾಧಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಜೂನ್ 17 ರಂದು ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಈ ಸಮ್ಮತಿ ಪತ್ರಕ್ಕೆ (ಎಂಒಯು) ಸಹಿ ಹಾಕಿದ್ದರು. ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ಸ್ಥಗಿತಗೊಳಿಸುವುದು ಹಾಗೂ 60 ದಿನಗಳ ಒಳಗೆ ಅಂತಿಮ ಒಪ್ಪಂದವನ್ನು ತಲುಪಲು ಶ್ರಮಿಸುವುದು ಇದರ ಮೂಲ ಉದ್ದೇಶವಾಗಿತ್ತು. ಎರಡೂ ಕಡೆಯವರು ಸಮ್ಮತಿಸಿದರೆ ಈ ಅವಧಿಯನ್ನು ವಿಸ್ತರಿಸುವ ಅವಕಾಶವೂ ಇತ್ತು.




