ಹಾರ್ಮುಝ್ ಜಲಸಂಧಿಯನ್ನು ಅಮೆರಿಕ, ಇರಾನ್ ಜಂಟಿಯಾಗಿ ನಿಯಂತ್ರಿಸಬಹುದು: ಟ್ರಂಪ್

PC | PTI
ವಾಶಿಂಗ್ಟನ್: ಹಾರ್ಮುಝ್ ಜಲಸಂಧಿಯನ್ನು ಅಮೆರಿಕ ಮತ್ತು ಇರಾನ್ ಜಂಟಿಯಾಗಿ ನಿಯಂತ್ರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ಇರಾನ್ನೊಂದಿಗೆ ಒಪ್ಪಂದ ಏರ್ಪಟ್ಟರೆ ಹಾರ್ಮುಝ್ ಜಲಸಂಧಿಯನ್ನು ಯಾರು ನಿಯಂತ್ರಿಸಬಹುದು ಎಂಬ ಪ್ರಶ್ನೆಗೆ ಟ್ರಂಪ್ ʼಬಹುಷಃ ನಾನು ಮತ್ತು ಹೊಸ ಆಯತೊಲ್ಲಾ, ಆಯತೊಲ್ಲಾ ಯಾರೇ ಆಗಿರಲಿ. ಜಲಸಂಧಿ ಶೀಘ್ರವೇ ತೆರೆಯಲಿದೆ ಮತ್ತು ಒಪ್ಪಂದಕ್ಕೆ ಸಹಿ ಬಿದ್ದೊಡನೆ ತೈಲ ಬೆಲೆ ಇಳಿಯಲಿದೆ' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.
ಅಮೆರಿಕ ಮತ್ತು ಇರಾನ್ ಇತ್ತೀಚಿನ ಮಾತುಕತೆಗಳಲ್ಲಿ ಒಪ್ಪಂದದ ಪ್ರಮುಖ ಅಂಶಗಳನ್ನು ತಲುಪಿವೆ. ದಾಳಿಗಳಿಗೆ ಐದು ದಿನಗಳ ವಿರಾಮವು ಫಲಪ್ರದವಾದರೆ ಮಧ್ಯಪ್ರಾಚ್ಯ ಸಂಘರ್ಷದ ಪರಿಹಾರಕ್ಕೆ ಕಾರಣವಾಗಬಹುದು ಎಂದು ಫ್ಲೋರಿಡಾದಲ್ಲಿ ವರದಿಗಾರರ ಜೊತೆ ಮಾತನಾಡಿದ ಟ್ರಂಪ್ ಹೇಳಿದ್ದಾರೆ.
"ಮಾತುಕತೆಯು ಇರಾನ್ನ ಅತ್ಯಂತ ಗೌರವಾನ್ವಿತ ಅಧಿಕಾರಿಯೊಂದಿಗೆ ನಡೆದಿದೆ. ಇರಾನ್ ತನ್ನ ಪರಮಾಣು ಮಹಾತ್ವಾಕಾಂಕ್ಷೆಗಳನ್ನು ಮತ್ತು ಯುರೇನಿಯಂ ದಾಸ್ತಾನನ್ನು ಬಿಟ್ಟುಕೊಡುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಮಾತುಕತೆ ಕೇಂದ್ರೀಕರಿಸಿದೆ. ನಾವು ಅವರ ನಾಯಕತ್ವದ ಒಂದನೇ ಹಂತ, ಎರಡನೆಯ ಹಂತ ಮತ್ತು ಬಹುತೇಕ ಮೂರನೆ ಹಂತವನ್ನು ಅಳಿಸಿ ಹಾಕಿದ್ದೇವೆ. ಆದರೆ ನಾವು ಅತ್ಯಂತ ಗೌರವಾನ್ವಿತ ನಾಯಕ ಎಂದು ನಂಬುವ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದೇವೆ. ಮಧ್ಯಪ್ರಾಚ್ಯದ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೆಡ್ ಕ್ರುಷ್ನರ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ರವಿವಾರ ಪ್ರಾರಂಭಗೊಂಡಿರುವ ಮಾತುಕತೆಯು ಸೋಮವಾರ ಮುಂದುವರಿಯುತ್ತದೆ ಮತ್ತು ಉತ್ಪಾದಕವಾಗಿ ಮುಂದುವರಿದರೆ ಶೀಘ್ರದಲ್ಲೇ ಒಪ್ಪಂದವನ್ನು ತಲುಪಬಹುದು. ಆದರೆ ಮಾತುಕತೆ ವಿಫಲವಾದರೆ ಬಾಂಬ್ ದಾಳಿ ಮುಂದುವರಿಯುತ್ತದೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.







