ಅಮೆರಿಕ–ಇರಾನ್ ಕದನ ವಿರಾಮದ ವಿಸ್ತರಣೆ ಒಪ್ಪಂದದ ಸನಿಹಕ್ಕೆ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್, ಮೇ 29: ದುರ್ಬಲ ಸ್ಥಿತಿಯಲ್ಲಿರುವ ತಮ್ಮ ನಡುವಿನ 60 ದಿನಗಳ ಕದನವಿರಾಮವನ್ನು ವಿಸ್ತರಿಸುವ ಕುರಿತು ಅಮೆರಿಕ ಹಾಗೂ ಇರಾನ್ನ ಸಂಧಾನಕಾರರು ಒಪ್ಪಂದಕ್ಕೆ ಬರುವ ಸನಿಹದಲ್ಲಿದ್ದಾರೆ. ಆದರೆ ಅಂತಿಮ ಅನುಮೋದನೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಇನ್ನಷ್ಟೇ ದೊರೆಯಬೇಕಿರುವುದರಿಂದ ಒಪ್ಪಂದದ ಭವಿಷ್ಯ ಇನ್ನೂ ತೂಗುಯ್ಯಾಲೆಯಲ್ಲಿದೆ ಎಂದು ಅಮೆರಿಕ ಆಡಳಿತದ ಮೂಲಗಳು ತಿಳಿಸಿವೆ.
ಕದನವಿರಾಮವನ್ನು ಉಲ್ಲಂಘಿಸಿರುವ ಕುರಿತು ಅಮೆರಿಕ ಹಾಗೂ ಇರಾನ್ ಪರಸ್ಪರ ದೋಷಾರೋಪಣೆ ಮಾಡುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಕದನವಿರಾಮವನ್ನು ವಿಸ್ತರಿಸುವ ಹಾಗೂ ಇರಾನ್ನ ಅಣ್ವಸ್ತ್ರ ಕಾರ್ಯಕ್ರಮದ ಕುರಿತು ಮಾತುಕತೆ ಆರಂಭಿಸುವ ಬಗ್ಗೆ ತಿಳುವಳಿಕೆ ಒಪ್ಪಂದಕ್ಕೆ ಬರಲು ಉಭಯ ದೇಶಗಳು ಸಮ್ಮತಿಸಿವೆ ಎಂದು ಅಮೆರಿಕದ ಮೂಲಗಳು ದೃಢಪಡಿಸಿವೆ.
ಪ್ರಸ್ತಾವಿತ ಒಪ್ಪಂದದ ಪ್ರಕಾರ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರಕ್ಕೆ ಯಾವುದೇ ನಿರ್ಬಂಧ, ಶುಲ್ಕ ಅಥವಾ ಕಿರುಕುಳ ಇರುವುದಿಲ್ಲ. 30 ದಿನಗಳೊಳಗೆ ಇರಾನ್ ಹಾರ್ಮುಝ್ನಲ್ಲಿ ಹುದುಗಿಸಿರುವ ಎಲ್ಲಾ ಮೈನ್ಗಳನ್ನು ತೆರವುಗೊಳಿಸಲಿದೆ. ವಾಣಿಜ್ಯ ಹಡಗುಗಳ ಸಂಚಾರ ಪುನರಾರಂಭಗೊಂಡ ಬಳಿಕ ಅಮೆರಿಕ ನೌಕಾಪಡೆಯ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಲಿದೆ ಎಂದು ಆ್ಯಕ್ಸಿಯೊಸ್ ವರದಿ ಮಾಡಿದೆ.
ಒಪ್ಪಂದದ ಪಠ್ಯವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಒಂದು ವೇಳೆ ಒಪ್ಪಂದ ಏರ್ಪಟ್ಟಲ್ಲಿ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗುವುದು ಎಂದು ಟೆಹರಾನ್ ನ ಸಂಧಾನಕಾರರನ್ನು ಉಲ್ಲೇಖಿಸಿ ತಾಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಾನ್ ಅಧಿಕೃತವಾಗಿ ಪ್ರಕಟಿಸಿದ ಬಳಿಕವೇ ಯಾವುದೇ ಒಪ್ಪಂದ ಪೂರ್ಣಗೊಂಡಂತಾಗುತ್ತದೆ; ಟ್ರಂಪ್ ಅವರ ಏಕಪಕ್ಷೀಯ ಘೋಷಣೆಯಿಂದಲ್ಲ ಎಂದು ಅದು ಹೇಳಿದೆ.






