ಮುಂದಿನ ವಾರ ಅಮೆರಿಕ-ಇರಾನ್ ಪರಮಾಣು ಮಾತುಕತೆ: ಟ್ರಂಪ್
ಹೊಸದಾಗಿ ರಚಿಸಿದ ಒಪ್ಪಂದ ಮಂಡನೆ ಸಾಧ್ಯತೆ: ವರದಿ

PC: x.com/KyivPost
ವಾಷಿಂಗ್ಟನ್: ಇರಾನಿನ ಪರಮಾಣು ಕಾರ್ಯಕ್ರಮಗಳ ಬಗ್ಗೆ ಮುಂದಿನ ವಾರ ಅಮೆರಿಕವು ಇರಾನಿನ ಜೊತೆ ಮಾತುಕತೆ ನಡೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್-ಇರಾನ್ ನಡುವಿನ 12 ದಿನದ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಆದರೆ ಅಮೆರಿಕದ ಜೊತೆ ಮಾತುಕತೆ ನಡೆಸುವ ಯಾವುದೇ ಯೋಜನೆಗಳಿಲ್ಲ ಎಂದು ಇರಾನ್ ಹೇಳಿದೆ.
ಮುಂದಿನ ವಾರ ನಡೆಯಲಿರುವ ಮಾತುಕತೆಯಲ್ಲಿ ತನ್ನ ಪರಮಾಣು ಮಹಾತ್ವಾಂಕ್ಷೆಗಳನ್ನು ಕೊನೆಗೊಳಿಸಲು ಇರಾನಿನಿಂದ ಬದ್ಧತೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಟ್ರಂಪ್ ಹೇಳಿದ್ದಾರೆ. `ಮುಂದಿನ ವಾರ ಅವರೊಂದಿಗೆ ಮಾತುಕತೆ ನಡೆಸಲಿದ್ದೇವೆ. ನಾವು ಒಪ್ಪಂದಕ್ಕೆ ಸಹಿ ಹಾಕಬಹುದು. ಅವರು (ಇರಾನ್) ಚೇತರಿಸಿಕೊಳ್ಳಲು ಬಯಸಿದ್ದಾರೆ. ಆದ್ದರಿಂದ ಯುರೇನಿಯಂ ಸಮೃದ್ಧಿಗೊಳಿಸಲು ಬಯಸುವುದಿಲ್ಲ ಎಂದು ನನಗನಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಇದೀಗ ಕದನ ವಿರಾಮ ಜಾರಿಯಲ್ಲಿರುವುದರಿಂದ ಇರಾನಿನ ಪರಮಾಣು ಮಹಾತ್ವಾಕಾಂಕ್ಷೆಗಳನ್ನು ಸ್ವೀಕಾರಾರ್ಹ ಮಿತಿಗಳಲ್ಲಿ ಇರಿಸಲು ಅವಕಾಶವಿದೆ. ಹೊಸದಾಗಿ ರಚಿಸಲಾದ ಒಪ್ಪಂದವನ್ನು ಸಹ ಸಭೆಯಲ್ಲಿ ಮಂಡಿಸಬಹುದು ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಪರಮಾಣು ಬಾಂಬ್ ಅನ್ನು ಹೊಂದಿರಲು ಸಾಧ್ಯವಿಲ್ಲ ಮತ್ತು ಮಾತುಕತೆಯ ಮೇಜಿಗೆ ಮರಳುವ ನಿರೀಕ್ಷೆಯಿದೆ. ಇರಾನ್ ಪರಮಾಣು ಅಸ್ತ್ರ ಹೊಂದಬಾರದು ಎಂಬುದಷ್ಟೇ ನಮ್ಮ ನಿಲುವು. ಇದನ್ನು ಹೊರತುಪಡಿಸಿದರೆ, ಅವರ ಯಶಸ್ಸನ್ನು ನಾನು ಹಾರೈಸುತ್ತೇನೆ. ಅವರು ಅಸಾಧಾರಣವಾಗಿರಬೇಕು. ಯಶಸ್ವಿಯಾಗಲು ಅವರಿಗೆ ನಾವು ಸಹಾಯ ಮಾಡುತ್ತೇವೆ. ನಾವು ಅವರೊಂದಿಗೆ ವ್ಯಾಪಾರ ಮಾಡುತ್ತೇವೆ. ಅಗತ್ಯವಾದುದನ್ನು ಮಾಡುತ್ತೇವೆ ಎಂದು ಈ ವಾರದ ಆರಂಭದಲ್ಲಿ ಫಾಕ್ಸ್ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದರು. ಮಂಗಳವಾರ ಮತ್ತೊಂದು ಅನಿರೀಕ್ಷಿತ ಹೇಳಿಕೆ ನೀಡಿದ್ದ ಟ್ರಂಪ್ `ಚೀನಾವು ಇರಾನಿನ ತೈಲ ಖರೀದಿಯನ್ನು ಮುಂದುವರಿಸಬಹುದು ಎಂದಿದ್ದರು. ಇರಾನಿನ ವಿರುದ್ಧದ ನಿರ್ಬಂಧಗಳನ್ನು ಸಡಿಲಿಸುವ ಸೂಚನೆ ಇದಾಗಿರಬಹುದು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.







