ಅಮೆರಿಕ-ಇರಾನ್ ಕೈದಿಗಳ ವಿನಿಮಯ

PHOTO : PTI
ದೋಹ : ಖತರ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು ಬದ್ಧ ರಾಜಕೀಯ ವೈರಿಗಳಾದ ಅಮೆರಿಕ ಮತ್ತು ಇರಾನ್ ಸೋಮವಾರ ಪರಸ್ಪರ ಕೈದಿಗಳ ವಿನಿಮಯ ನಡೆಸಿದ್ದು, ಜತೆಗೆ ಸ್ಥಂಭನಗೊಳಿಸಲಾಗಿದ್ದ ಇರಾನಿನ 6 ಶತಕೋಟಿ ಡಾಲರ್ ಮೊತ್ತವನ್ನೂ ಇರಾನ್ ಬಳಸಲು ಅವಕಾಶ ದೊರಕಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇರಾನ್ ಬಿಡುಗಡೆಗೊಳಿಸಿದ ಐವರು ಅಮೆರಿಕನ್ನರು ಖತರ್ ನ ಜೆಟ್ವಿಮಾನದ ಮೂಲಕ ಖತರ್ ತಲುಪಿದ್ದು ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಜತೆಗೆ, ಸ್ಥಂಭನಗೊಳಿಸಿದ್ದ ನಿಧಿಯ ಮೇಲಿನ ನಿರ್ಬಂಧ ತೆರವಾಗಿದ್ದು ಅದನ್ನು ಖತರ್ ಕೂಡಾ ಜಂಟಿಯಾಗಿ ನಿರ್ವಹಿಸುವ ಇರಾನಿನ ಖಾತೆಗೆ ವರ್ಗಾಯಿಸಲಾಗಿದೆ.
ರಾಜಕೀಯವಾಗಿ ಸಾಕಷ್ಟು ಟೀಕೆ ಎದುರಾಗಿದ್ದರೂ ಅವನ್ನು ಲೆಕ್ಕಿಸದೇ ಅಮೆರಿಕ ಅಧ್ಯಕ್ಷ ಬೈಡನ್ ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಬಿಡುಗಡೆಗೊಂಡಿರುವ ಅಮೆರಿಕನ್ ಕೈದಿಗಳು ಸಂತಸ ವ್ಯಕ್ತಪಡಿಸಿದ್ದು ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಮೆರಿಕ ಬಿಡುಗಡೆಗೊಳಿಸಿರುವ ಇರಾನಿನ ಇಬ್ಬರು ಕೈದಿಗಳು ಖತರ್ ಗೆ ಆಗಮಿಸಿದ್ದರೆ, ಬಿಡುಗಡೆಗೊಂಡಿರುವ ಇತರ ಮೂವರು ಅಮೆರಿಕದಲ್ಲೇ ಅಥವಾ ತಮ್ಮಿಷ್ಟದ ದೇಶದಲ್ಲಿ ನೆಲೆಸಲು ಇಚ್ಛಿಸಿದ್ದಾರೆ ಎಂದು ವರದಿಯಾಗಿದೆ.