ಹಾರ್ವರ್ಡ್ ವಿವಿಗೆ ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ನಿರ್ಬಂಧಿಸಿದ ಟ್ರಂಪ್ ಆಡಳಿತದ ಆದೇಶಕ್ಕೆ ಯುಎಸ್ ನ್ಯಾಯಾಲಯ ತಡೆ

Photo | NDTV
ವಾಷಿಂಗ್ಟನ್ : ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳದಂತೆ ನಿರ್ಬಂಧಿಸಿದ ಟ್ರಂಪ್ ಸರಕಾರದ ಆದೇಶಕ್ಕೆ ಅಮೆರಿಕದ ನ್ಯಾಯಾಲಯ ತಾತ್ಕಾಲಿಕವಾಗಿ ತಡೆ ನೀಡಿದೆ.
ಟ್ರಂಪ್ ಸರಕಾರದ ಆದೇಶವು ಅಮೆರಿಕ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಹಾರ್ವರ್ಡ್ ವಿವಿ ಮ್ಯಾಸಚೂಸೆಟ್ಸ್ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಕೆಲವೇ ಗಂಟೆಗಳಲ್ಲಿ ಈ ತೀರ್ಪು ಹೊರ ಬಂದಿದೆ.
2025-2026ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಬಹುದಾಗಿದ್ದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಆದೇಶವನ್ನು ಪ್ರಶ್ನಿಸಿದ್ದ ಹಾರ್ವರ್ಡ್ ವಿವಿಯ ಅರ್ಜಿಯನ್ನು ಪುರಸ್ಕರಿಸಿದ ಬೋಸ್ಟನ್ ಜಿಲ್ಲಾ ನ್ಯಾಯಾಧೀಶೆ ಆಲಿಸನ್ ಬರೋಸ್ ತಾತ್ಕಾಲಿಕವಾಗಿ ತಡೆಯಾಜ್ಞೆಯನ್ನು ವಿಧಿಸಿದರು.
ಟ್ರಂಪ್ ಆಡಳಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳದಂತೆ ನಿರ್ಬಂಧವನ್ನು ವಿಧಿಸಿತ್ತು. ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ʼಹಿಂಸೆ, ಯೆಹೂದ್ಯ ವಿರೋಧಿತ್ವವನ್ನು ಬೆಳೆಸಿದ್ದಕ್ಕಾಗಿ ಮತ್ತು ಕ್ಯಾಂಪಸ್ನಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಮನ್ವಯ ಸಾಧಿಸಿದ್ದಕ್ಕಾಗಿ ಟ್ರಂಪ್ ಆಡಳಿತವು ಹಾರ್ವರ್ಡ್ ವಿವಿಯನ್ನು ಹೊಣೆಗಾರರನ್ನಾಗಿ ಮಾಡುತ್ತಿದೆʼ ಎಂದು ಹೇಳಿದ್ದರು.







