ಅಮೆರಿಕ | ಅಂಚೆ ಮತದಾನ ಪರಿಮಿತಿಗೊಳಿಸುವ ಟ್ರಂಪ್ ಆಡಳಿತದ ಆದೇಶಕ್ಕೆ ನ್ಯಾಯಾಧೀಶರ ತಡೆ

Photo Credit : AP
ನ್ಯೂಯಾರ್ಕ್, ಆ.12: ಫೆಡರಲ್ ಮತದಾರರ ಪಟ್ಟಿಯನ್ನು ರಚಿಸಲು ಮತ್ತು ಅಂಚೆ ಮೂಲಕ ಮತದಾನವನ್ನು ಪರಿಮಿತಿಗೊಳಿಸಲು ಬಯಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಾಂಗದ ಆದೇಶದ ವಿರುದ್ಧ ಫೆಡರಲ್ ನ್ಯಾಯಾಧೀಶರೊಬ್ಬರು ಮಂಗಳವಾರ ತೀರ್ಪು ನೀಡಿದ್ದಾರೆ.
ನವೆಂಬರ್ 3, 2026ರ ಮಧ್ಯಂತರ ಚುನಾವಣೆಗಳಿಗೆ ಈಗ 90 ದಿನಗಳಿಗಿಂತಲೂ ಕಡಿಮೆ ಸಮಯ ಬಾಕಿಯಿದೆ. ಚುನಾವಣೆ ಹತ್ತಿರವಿರುವಾಗ ಪ್ರತಿವಾದಿಗಳು ಚುನಾವಣಾ ನಿಯಮಗಳನ್ನು ಬದಲಾಯಿಸುವುದನ್ನು ತಡೆಯಲು ತಡೆಯಾಜ್ಞೆಯ ತುರ್ತು ಅಗತ್ಯವಿದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಚುನಾವಣೆಗಳನ್ನು ನಿಯಂತ್ರಿಸುವ ಯಾವುದೇ ಅಧಿಕಾರ ಕಾರ್ಯಾಂಗಕ್ಕೆ ಇಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರೀಯ ಚುನಾವಣಾ ನಿಯಮಗಳನ್ನು ರೂಪಿಸಲು ಟ್ರಂಪ್ ಅವರು ಮಾರ್ಚ್ನಲ್ಲಿ ಸಹಿ ಮಾಡಿದ್ದ ಎರಡನೇ ಆದೇಶವನ್ನು ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಈಗಾಗಲೇ ತಡೆಹಿಡಿದಿದ್ದಾರೆ. ಈ ತೀರ್ಪು ಟ್ರಂಪ್ ಆಡಳಿತಕ್ಕೆ ಮತ್ತೊಂದು ಕಾನೂನು ತೊಡಕನ್ನು ಉಂಟುಮಾಡಿದೆ. ಸುಪ್ರೀಂಕೋರ್ಟ್ ಮೂಲಕ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಲು ಟ್ರಂಪ್ ಆಡಳಿತ ಯತ್ನಿಸುವ ಸಾಧ್ಯತೆಯಿದೆ.




