ಅಮೆರಿಕದ ಸೇನಾನೆಲೆಯ ಫೋಟೋ ಸೆರೆ ಹಿಡಿದ ಉ.ಕೊರಿಯಾ ಉಪಗ್ರಹ: ವರದಿ

Photo: NDTV
ಪ್ಯೋಂಗ್ಯಾಂಗ್: ಈ ವಾರದ ಆರಂಭದಲ್ಲಿ ಅಂತರಿಕ್ಷಕ್ಕೆ ಉಡಾವಣೆ ಮಾಡಿದ ಬೇಹುಗಾರಿಕಾ ಉಪಗ್ರಹವು ಅಮೆರಿಕವು ಹವಾಯಿಯ ಪರ್ಲ್ ಬಂದರು ಮತ್ತು ದಕ್ಷಿಣ ಕೊರಿಯಾದಲ್ಲಿ ಹೊಂದಿರುವ ಸೇನಾನೆಲೆಗಳ ಫೋಟೋವನ್ನು ಸೆರೆಹಿಡಿದಿದ್ದು ಅದನ್ನು ಅಧ್ಯಕ್ಷ ಕಿಮ್ಜಾಂಗ್ ಉನ್ ಪರಿಶೀಲಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕೆಸಿಎನ್ಎ ಸುದ್ಧಿಸಂಸ್ಥೆ ಶನಿವಾರ ವರದಿ ಮಾಡಿದೆ.
ಮಂಗಳವಾರ ಉಡಾವಣೆ ಮಾಡಿದ ಕೆಲವೇ ಗಂಟೆಯಲ್ಲಿ ಉಪಗ್ರಹವು ಗುವಾಮ್ ಪ್ರದೇಶದಲ್ಲಿರುವ ಅಮೆರಿಕ ಸೇನಾನೆಲೆಯ ಫೋಟೋ ರವಾನಿಸಿದೆ ಎಂದು ಕಿಮ್ಜಾಂಗ್ ಸುದ್ಧಿಗೋಷ್ಟಿಯಲ್ಲಿ ಫೋಟೋವನ್ನು ಪ್ರದರ್ಶಿಸಿದ್ದರು. ಇದೀಗ ಶನಿವಾರ ಬೆಳಿಗ್ಗೆ 5 ಗಂಟೆಗೆ ಉಪಗ್ರಹವು ಹವಾಯಿ ದ್ವೀಪದ ಮೇಲೆ ಹಾದುಹೋದಾಗ ಪರ್ಲ್ ಬಂದರಿನ ನೌಕಾನೆಲೆ, ಹೊನೊಲುಲು ದ್ವೀಪದಲ್ಲಿರುವ ಅಮೆರಿಕ ಹಿಕಾಮ್ ವಾಯುನೆಲೆ, ಅಮೆರಿಕದ ಪರಮಾಣುಶಕ್ತ ವಿಮಾನವಾಹಕ ಯುದ್ಧನೌಕೆ ಯುಎಸ್ಎಸ್ ಕಾರ್ಲೊ ವಿನ್ಸನ್ನ ಫೋಟೋವನ್ನು ಸೆರೆಹಿಡಿದು ರವಾನಿಸಿದೆ. ದಕ್ಷಿಣ ಕೊರಿಯಾದ ಮೇಲೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಹಾದುಹೋದಾಗ ಬಂದರು ನಗರ ಬುಸಾನ್ ಸಹಿತ ಹಲವು ಸೂಕ್ಷ್ಮ ಪ್ರದೇಶಗಳ ಫೋಟೋ ಸೆರೆಹಿಡಿದಿದೆ ಎಂದು ವರದಿ ಹೇಳಿದೆ.





