ಇರಾನ್ ನಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ; ಕಟ್ಟೆಚ್ಚರದಲ್ಲಿ ಇಸ್ರೇಲ್: ವರದಿ

pc: timesofindia
ಹೊಸದಿಲ್ಲಿ: ಇರಾನ್ನಲ್ಲಿ ನಡೆಯುತ್ತಿರುವ ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಯನ್ನು ಭದ್ರತಾ ಪಡೆಗಳು ಹತ್ತಿಕ್ಕುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ ಇರುವುದರಿಂದ ಇಸ್ರೇಲ್ ನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಇಸ್ರೇಲ್ ನ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು theprint.in ವರದಿ ಮಾಡಿದೆ.
ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆಗಳನ್ನು ಬಳಸುತ್ತಿರುವುದರ ವಿರುದ್ಧ ಹಾಗೂ ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ದಿನಗಳಲ್ಲಿ ಬೆದರಿಕೆ ಒಡ್ಡುತ್ತಿದ್ದಾರೆ. ಇರಾನ್ ಜನತೆಗೆ ನೆರವು ನೀಡಲು ಅಮೆರಿಕ ಸಿದ್ಧವಿದೆ ಎಂದೂ ಅವರು ಭರವಸೆ ನೀಡಿದ್ದಾರೆ.
ಇಸ್ರೇಲ್ ಕಟ್ಟೆಚ್ಚರ ವಹಿಸುವುದರ ವಿಸ್ತೃತ ವಿವರವನ್ನು ವಾರಾಂತ್ಯದಲ್ಲಿ ನಡೆದ ಇಸ್ರೇಲ್ ಭದ್ರತಾ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದವರು ಬಹಿರಂಗಪಡಿಸಿಲ್ಲ ಎಂದು ಈ ಮೂಲಗಳು ಹೇಳಿವೆ ಎಂದು ವರದಿಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಇಸ್ರೇಲ್ ಇರಾನ್ನೊಂದಿಗೆ 12 ದಿನಗಳ ಯುದ್ಧ ನಡೆಸಿತ್ತು. ಈ ವೇಳೆ ಅಮೆರಿಕವೂ ಇಸ್ರೇಲ್ ನೊಂದಿಗೆ ವಾಯುದಾಳಿಯಲ್ಲಿ ಪಾಲ್ಗೊಂಡಿತ್ತು.
ಈ ಸಭೆಯಲ್ಲಿ ಭಾಗವಹಿಸಿದ್ದ ಇಸ್ರೇಲ್ ಮೂಲವೊಂದರ ಪ್ರಕಾರ, ಶನಿವಾರ ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಅವರಿಬ್ಬರೂ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಅಧಿಕಾರಿಯೊಬ್ಬರು ದೃಢಪಡಿಸಿದ್ದರೂ, ಯಾವ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.







