US Midterm Election | ಡೆಮಾಕ್ರಟಿಕ್ ಗೆಲುವಿನ ಬೆನ್ನಲ್ಲೇ ಅಮೆರಿಕದ ಷೇರುಪೇಟೆಯಲ್ಲಿ ಭರ್ಜರಿ ಚೇತರಿಕೆ
ಡೌ ಜೋನ್ಸ್ ಶೇ. 1.8ರಷ್ಟು ಜಿಗಿತ; ವಾಲ್ಮಾರ್ಟ್, ಟಾರ್ಗೆಟ್ ಷೇರುಗಳಿಗೂ ಲಾಭ

Photo Credit : Al Jazeera
ನ್ಯೂಯಾರ್ಕ್: ಅಮೆರಿಕದ ಮಧ್ಯಾವಧಿ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ದೇಶದ ಷೇರುಪೇಟೆಯಲ್ಲಿ ಸಂಭ್ರಮದ ವಹಿವಾಟು ನಡೆದಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರ ಮೇಲೂ ಡೆಮಾಕ್ರಟಿಕ್ ಪಕ್ಷ ಹಿಡಿತ ಸಾಧಿಸಿದ ಬೆನ್ನಲ್ಲೇ ಬುಧವಾರ ಪ್ರಮುಖ ಷೇರು ಸೂಚ್ಯಂಕಗಳು ಏರಿಕೆ ದಾಖಲಿಸಿವೆ ಎಂದು Aljazeera ವರದಿ ಮಾಡಿದೆ.
ಬುಧವಾರ ಬೆಳಿಗ್ಗೆ 9.30ಕ್ಕೆ (ಅಮೆರಿಕದ ಕಾಲಮಾನ) ವಹಿವಾಟು ಆರಂಭವಾದಾಗ ನಾಸ್ಡಾಕ್ ಸೂಚ್ಯಂಕ ಶೇ. 1ರಷ್ಟು, ಡೌ ಜೋನ್ಸ್ ಕೈಗಾರಿಕಾ ಸರಾಸರಿ ಶೇ. 1.8ರಷ್ಟು ಹಾಗೂ ಎಸ್ ಆ್ಯಂಡ್ ಪಿ 500 ಸೂಚ್ಯಂಕ ಶೇ. 1.1ರಷ್ಟು ಏರಿಕೆ ಕಂಡಿವೆ.
ಆಮದುಗಳ ಮೇಲೆ ಅವಲಂಬಿತವಾಗಿರುವ ಪ್ರಮುಖ ಚಿಲ್ಲರೆ ವ್ಯಾಪಾರ ಕಂಪೆನಿಗಳಾದ ವಾಲ್ಮಾರ್ಟ್ ಮತ್ತು ಟಾರ್ಗೆಟ್ ಷೇರುಗಳೂ ಹಸಿರು ವಲಯದಲ್ಲಿ ವಹಿವಾಟು ನಡೆಸಿವೆ. ವಾಲ್ಮಾರ್ಟ್ ಷೇರುಗಳು ಶೇ. 1.3ರಷ್ಟು ಹಾಗೂ ಟಾರ್ಗೆಟ್ ಷೇರುಗಳು ಶೇ. 2.3ರಷ್ಟು ಏರಿಕೆ ದಾಖಲಿಸಿವೆ. ಸುಂಕ ನೀತಿಯಲ್ಲಿ ಸಂಭವನೀಯ ಬದಲಾವಣೆಗಳ ನಿರೀಕ್ಷೆಯ ನಡುವೆಯೂ ಈ ಬೆಳವಣಿಗೆ ಕಂಡುಬಂದಿದೆ.
ಇನ್ನೊಂದೆಡೆ, ಆರೋಗ್ಯ ವಿಮಾ ವಲಯದ ಷೇರುಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. ಯುನೈಟೆಡ್ ಹೆಲ್ತ್ಕೇರ್ ಷೇರುಗಳು ವಹಿವಾಟಿನ ಆರಂಭದಲ್ಲಿ ಶೇ. 1.94ರಷ್ಟು ಕುಸಿದರೆ, ಸಿವಿಎಸ್ ಹೆಲ್ತ್ ಷೇರುಗಳು ಆರಂಭದಲ್ಲಿ ಶೇ. 6.7ರಷ್ಟು ಇಳಿಕೆ ಕಂಡು, ಬಳಿಕ ಶೇ. 12ಕ್ಕಿಂತಲೂ ಹೆಚ್ಚು ಕುಸಿದಿವೆ. ಇದಕ್ಕೆ ವ್ಯತಿರಿಕ್ತವಾಗಿ ಸಿಗ್ನಾ ಷೇರುಗಳು ಶೇ. 2.2ರಷ್ಟು ಏರಿಕೆ ದಾಖಲಿಸಿವೆ.
ಚುನಾವಣಾ ಫಲಿತಾಂಶವನ್ನು ಸ್ವೀಕರಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವುದು ಹೂಡಿಕೆದಾರರ ವಿಶ್ವಾಸ ಹೆಚ್ಚಲು ಕಾರಣವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಆವರಿಸಿದ್ದ ರಾಜಕೀಯ ಅನಿಶ್ಚಿತತೆ ಮತ್ತು ಒತ್ತಡ ತಗ್ಗಿದೆ.






