Venezuela ಮೇಲಿನ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಹಿಂಪಡೆಯುವ ಸಾಧ್ಯತೆ: US ಖಜಾನೆ ಕಾರ್ಯದರ್ಶಿ ಬೆಸೆಂಟ್

ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್| Photo Credit: Reuters
ವಾಷಿಂಗ್ಟನ್: ತೈಲ ಮಾರಾಟಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವೆನಿಝುವೆಲಾ ಮೇಲೆ ಹೆಚ್ಚುವರಿಯಾಗಿ ವಿಧಿಸಲಾಗಿದ್ದ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ವೆನಿಝುವೆಲಾದೊಂದಿಗೆ ಮರು ಮಾತುಕತೆ ನಡೆಸಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ನ ಮುಖ್ಯಸ್ಥರನ್ನು ಮುಂದಿನ ವಾರ ನಾನು ಭೇಟಿಯಾಗಲಿದ್ದೇನೆ ಎಂದೂ ಅವರು ಹೇಳಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವೆನಿಝುವೆಲಾ ಆರ್ಥಿಕತೆಯನ್ನು ಮರುನಿರ್ಮಾಣ ಮಾಡಲು, ಸದ್ಯ ಮುಟ್ಟುಗೋಲು ಹಾಕಲಾಗಿರುವ ವೆನಿಝುವೆಲಾದ ಹಣಕಾಸು ಸ್ವತ್ತುಗಳ ವಿಶೇಷ ಹಿಂಪಡೆಯುವ ಅಧಿಕಾರದ ಅಡಿಯಲ್ಲಿ ಇರುವ 5 ಶತಕೋಟಿ ಡಾಲರ್ ಮೊತ್ತವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ಶುಕ್ರವಾರ ತಡರಾತ್ರಿ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
“ಮಾರಾಟವಾಗಲಿರುವ ತೈಲದ ಮೇಲಿನ ಆರ್ಥಿಕ ದಿಗ್ಬಂಧನವನ್ನು ನಾವು ಹಿಂಪಡೆಯಲಿದ್ದೇವೆ” ಎಂದು ವಿನ್ನೆಬಾಗೊ ಇಂಡಸ್ಟ್ರೀಸ್ನ ಇಂಜಿನಿಯರಿಂಗ್ ಸೌಲಭ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಸೆಂಟ್ ಹೇಳಿದ್ದಾರೆ. ಹಡಗುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗಿರುವ ತೈಲದ ಮಾರಾಟದಿಂದ ಬಂದ ಹಣವನ್ನು ವೆನಿಝುವೆಲಾಗೆ ಮರಳಿ ನೀಡುವ ಬದಲಾವಣೆ ಪ್ರಕ್ರಿಯೆಗಳನ್ನು ಅವರು ಪರಿಶೀಲಿಸುತ್ತಿದ್ದರು.
‘ವೆನಿಝುವೆಲಾ ಮೇಲಿನ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಹಿಂಪಡೆಯಲಾಗುವುದೇ?’ ಎಂಬ ಪ್ರಶ್ನೆಗೆ, “ಮುಂದಿನ ವಾರ ಈ ಕುರಿತು ಪರಿಶೀಲಿಸಲಾಗುವುದು” ಎಂದು ಅವರು ಉತ್ತರಿಸಿದ್ದಾರೆ. ಆದರೆ ಯಾವ ಆರ್ಥಿಕ ದಿಗ್ಬಂಧನವನ್ನು ಹಿಂಪಡೆಯಲಾಗುವುದು ಎಂಬ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.







