US Midterm Election | ಅಲ್-ಸಯೀದ್ ಸೆನೆಟ್ ಗೆಲುವಿಗೆ ಈಜಿಪ್ಟಿನ ಪ್ರಮುಖರ ಮೆಚ್ಚುಗೆ
ಧಾರ್ಮಿಕ, ಜನಾಂಗೀಯ ಭಿನ್ನತೆಗಳ ನಡುವೆಯೂ ಜನರ ಇಚ್ಛೆಗೆ ಮನ್ನಣೆ: ಅಮೆರಿಕದ ರಾಜಕೀಯ ವ್ಯವಸ್ಥೆಗೆ ಶ್ಲಾಘನೆ

Photo: x.com/_FrontlineChron
ವಾಶಿಂಗ್ಟನ್: ಅಮೆರಿಕದ ಸೆನೆಟ್ ಗೆ ಮೊದಲ ಮುಸ್ಲಿಂ ಸದಸ್ಯರಾಗಿ ಅಬ್ದುಲ್ ಅಲ್-ಸಯೀದ್ ಆಯ್ಕೆಯಾಗಿರುವುದಕ್ಕೆ ಈಜಿಪ್ಟಿನ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಗೆಲುವು ಧಾರ್ಮಿಕ ಮತ್ತು ಜನಾಂಗೀಯ ಭಿನ್ನತೆಗಳನ್ನು ಮೀರಿ ಜನರ ಇಚ್ಛೆಗೆ ಮನ್ನಣೆ ನೀಡುವ ಅಮೆರಿಕದ ರಾಜಕೀಯ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸಿದೆ ಎಂದು ಶ್ಲಾಘಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಜನಪ್ರಿಯ ಟಿವಿ ನಿರೂಪಕ ಅಮ್ರ್ ಅದಿಬ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, “ಅಮೆರಿಕದ ಬಗ್ಗೆ ನಿಮಗೆ ಏನೇ ಅಭಿಪ್ರಾಯವಿರಲಿ, ಅಬ್ದುಲ್ ರಹಮಾನ್ ಮುಹಮ್ಮದ್ ಅಲ್-ಸಯೀದ್ ಅವರು ಅಮೆರಿಕದ ಸೆನೆಟರ್ ಆಗಲು ಅವಕಾಶ ಮಾಡಿಕೊಟ್ಟ ರಾಜಕೀಯ ವ್ಯವಸ್ಥೆಯನ್ನು ಮೆಚ್ಚಲೇಬೇಕು” ಎಂದು ಬರೆದಿದ್ದಾರೆ.
ಮತ್ತೊಬ್ಬ ಪ್ರಸಿದ್ಧ ಟಿವಿ ನಿರೂಪಕಿ ಯಾಸ್ಮಿನ್ ಎಲ್-ಖತೀಬ್ ಕೂಡ ಅಲ್-ಸಯೀದ್ ಅವರ ಗೆಲುವನ್ನು ಶ್ಲಾಘಿಸಿದ್ದಾರೆ.
“ಅಮೆರಿಕವು ತನ್ನ ಎಲ್ಲ ದೋಷಗಳ ನಡುವೆಯೂ ಧಾರ್ಮಿಕ ಮತ್ತು ಜನಾಂಗೀಯ ಭಿನ್ನತೆಗಳನ್ನು ಮೀರಿ, ಅಧ್ಯಕ್ಷರ ಇಚ್ಛೆಗೆ ವಿರುದ್ಧವಾಗಿಯೂ ಜನರ ಇಚ್ಛೆಯೇ ಮೇಲುಗೈ ಸಾಧಿಸಬಹುದು ಎಂಬುದನ್ನು ಈ ಗೆಲುವು ದೃಢಪಡಿಸಿದೆ” ಎಂದು ಅವರು ಬರೆದಿದ್ದಾರೆ.
ಮಾಜಿ ಅಧ್ಯಕ್ಷ ಹುಸ್ನಿ ಮುಬಾರಕ್ ಅವರ ಪುತ್ರ ಅಲಾ ಮುಬಾರಕ್ ಅವರು ಅಲ್-ಸಯೀದ್ ಅವರ ವಿಜಯ ಭಾಷಣದ ವೀಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ. ಭಾಷಣದ ವೇಳೆ ಅಲ್-ಸಯೀದ್ ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರನ್ನು ಅರೇಬಿಕ್ ನ ಪ್ರೀತಿಯ ಸಂಬೋಧನೆಯಾದ 'ಹಬೀಬಿ' ಎಂದು ತಮಾಷೆಯಾಗಿ ಕರೆದಿದ್ದರು.
ಮಿಶಿಗನ್ ನಲ್ಲಿ ಈಜಿಪ್ಟ್ ವಲಸಿಗ ದಂಪತಿಗೆ ಜನಿಸಿದ ಅಲ್-ಸಯೀದ್, ತಮ್ಮ ಈಜಿಪ್ಟಿನ ಮೂಲದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ ಬಂದಿದ್ದಾರೆ. ಈಜಿಪ್ಟಿನ ಆಹಾರ ಮತ್ತು ಹಾಸ್ಯವನ್ನು ಹೊಗಳಿರುವ ಅವರು, ತಮ್ಮ ತಂದೆ ಬೆಳೆದ ಮೆಡಿಟರೇನಿಯನ್ ಕರಾವಳಿಯ ಅಲೆಕ್ಸಾಂಡ್ರಿಯಾ ನಗರದಲ್ಲಿ ಕಳೆದ ಬೇಸಿಗೆಯ ದಿನಗಳನ್ನು ಪ್ರೀತಿಯಿಂದ ಸ್ಮರಿಸಿದ್ದಾರೆ.






