ಖತರ್ ಸಮೀಪ ಅಮೆರಿಕದ ಮಿಲಿಟರಿ ವಿಮಾನ ನಾಪತ್ತೆ!

Credit: Flightradar 24 and AFP
ದೋಹ: ಅಮೆರಿಕದ ಮಿಲಿಟರಿ ವಿಮಾನಗಳಿಗೆ ಇಂಧನ ಪೂರೈಸಲು ನಿಯೋಜನೆಗೊಂಡಿದ್ದ ಬೋಯಿಂಗ್ ಕೆಸಿ-135 ಸ್ಟ್ರಾಟೋಟ್ಯಾಂಕರ್ ವಿಮಾನವು ಇರಾನ್ ಬಳಿ ಪರ್ಷಿಯನ್ ಕೊಲ್ಲಿಯ ಮೇಲೆ ಹಾರುತ್ತಿದ್ದಾಗ ಎಮರ್ಜೆನ್ಸಿ(7700) ಸಂದೇಶ ರವಾನಿಸಿ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ವಿಮಾನದ ʼಟ್ರ್ಯಾಕಿಂಗ್ ವೇದಿಕೆ'ಯ ಪ್ರಕಾರ , ತುರ್ತು ಸಂದೇಶ ರವಾನಿಸಿದ ಸಂದರ್ಭ ವಿಮಾನವು ಖತರ್ ಕಡೆ ಚಲಿಸುತ್ತಿತ್ತು. ಹಾರುವ ಇಂಧನ ಕೇಂದ್ರ ಎಂದೂ ಕರೆಯಲಾಗುವ ಸ್ಟ್ರಾಟೋಟ್ಯಾಂಕರ್ ವಿಮಾನವು ಹಾರ್ಮುಜ್ ಜಲಸಂಧಿ/ ಅರೇಬಿಯನ್ ಗಲ್ಫ್ ಪ್ರದೇಶದ ಮೇಲೆ ಹಾರುತ್ತಿದ್ದಾಗ ವಿಮಾನದೊಳಗೆ ತುರ್ತು ಪರಿಸ್ಥಿತಿ ಉಂಟಾಗಿದೆ. ವಿಮಾನವು ಗಲ್ಫ್ ಪ್ರದೇಶದ ಮೇಲೆ ಇಂಧನ ತುಂಬುವ ಕಾರ್ಯಾಚರಣೆ ನಡೆಸುತ್ತಿದ್ದಾಗ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಮಿಲಿಟರಿ ವಿಮಾನವು ತನ್ನ ಸಂಪರ್ಕವನ್ನು ಕಳೆದುಕೊಂಡ ನಂತರ ಎಚ್-125 ಲಘು ಹೆಲಿಕಾಪ್ಟರ್ ಅನ್ನು ಪ್ರದೇಶದಲ್ಲಿ ಗಮನಿಸಲಾಗಿದೆ ಎಂದು ʼಗಲ್ಫ್ ನ್ಯೂಸ್ʼ ವರದಿ ಮಾಡಿದೆ.
ವಾಯುಪಡೆಯ ಪ್ರಮುಖ ಶಕ್ತಿ ಕೆಸಿ-135:
KC-135 Stratotanker ಯುಎಸ್ ವಾಯುಪಡೆಯ ಪ್ರಮುಖ ವೈಮಾನಿಕ ಇಂಧನ ಮರುಪೂರಣ ವಿಮಾನವಾಗಿದೆ. 1950ರ ದಶಕದಲ್ಲಿ ಪರಿಚಯವಾದ ಈ ವಿಮಾನವು ಇಂದಿಗೂ ಯುದ್ಧ ಮತ್ತು ಬೆಂಬಲ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಇದು ಆಗಸದಲ್ಲೇ ಇಂಧನ ಪೂರೈಸುವ ಮೂಲಕ ಫೈಟರ್ ಜೆಟ್ಗಳು, ಬಾಂಬರ್ ಗಳು ಮತ್ತು ವಿಚಕ್ಷಣ ವಿಮಾನಗಳ ಹಾರಾಟದ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಇದರ ‘ಫ್ಲೈಯಿಂಗ್ ಬೂಮ್’ ವ್ಯವಸ್ಥೆ ಮೂಲಕ ಇಂಧನ ಪೂರೈಕೆ ನಡೆಯುತ್ತದೆ.
ಈ ವಿಮಾನವು ಯುರೋಪ್, ಮಧ್ಯಪ್ರಾಚ್ಯ, ಇಂಡೋ-ಪೆಸಿಫಿಕ್ ಸೇರಿದಂತೆ ವಿವಿಧ ಭಾಗಗಳಲ್ಲಿ ನಿಯೋಜಿತವಾಗಿದ್ದು, ಯುದ್ಧ ಕಾರ್ಯಾಚರಣೆಗಳ ಜೊತೆಗೆ ಮಾನವೀಯ ನೆರವು ಮತ್ತು ತರಬೇತಿ ಕಾರ್ಯಗಳಲ್ಲಿಯೂ ಬಳಸಲಾಗುತ್ತಿದೆ.
ವೈಮಾನಿಕ ಇಂಧನ ಪೂರೈಕೆಯ ವ್ಯವಸ್ಥೆಯಿಲ್ಲದೆ ದೀರ್ಘ ದೂರದ ಕಾರ್ಯಾಚರಣೆಗಳಿಗೆ ಹಲವು ಬಾರಿ ಇಳಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೆಸಿ-135 ವಿಮಾನವು ಯುಎಸ್ ಮತ್ತು ಮಿತ್ರ ರಾಷ್ಟ್ರಗಳ ಜಾಗತಿಕ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಮುಖ ಸಾಧನವಾಗಿದೆ.






