ಇರಾನ್ ಮೇಲೆ ಅಮೆರಿಕದಿಂದ ದಾಳಿ; ಕುವೈತ್, ಜೋರ್ಡಾನ್ ನಲ್ಲಿನ ಅಮೆರಿಕದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದುದಾಗಿ ಇರಾನ್ ಹೇಳಿಕೆ

Photo Credit ; aljazeera.com
ವಾಷಿಂಗ್ಟನ್/ಟೆಹರಾನ್, ಜು.16: ಇರಾನ್ ವಿರುದ್ಧದ ತನ್ನ ಇತ್ತೀಚಿನ ದಾಳಿಗಳ ಸರಣಿ ಪೂರ್ಣಗೊಂಡಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM ) ಗುರುವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ಬೆದರಿಕೆ ಒಡ್ಡುವ ಇರಾನ್ ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಇರಾನ್ ನ ಕಮಾಂಡ್ ಕೇಂದ್ರಗಳು, ವಾಯು ರಕ್ಷಣಾ ತಾಣಗಳು, ಕ್ಷಿಪಣಿ ಹಾಗೂ ಡ್ರೋನ್ ಸಾಮರ್ಥ್ಯಗಳು ಮತ್ತು ಕರಾವಳಿ ಕಣ್ಗಾವಲು ಸೌಲಭ್ಯಗಳ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿವೆ ಎಂದು CENTCOM ಹೇಳಿಕೆಯಲ್ಲಿ ತಿಳಿಸಿದೆ.
ಬಂದರ್ ಅಬ್ಬಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಗುರಿಗಳ ಮೇಲೆ ‘ನಿಖರ ಯುದ್ಧಾಸ್ತ್ರ’ಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.
ಬುಧವಾರ 90 ನಿಮಿಷಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಗ್ರೇಟರ್ ಟನ್ಬ್ ದ್ವೀಪದಲ್ಲಿನ ಕರಾವಳಿ ರಕ್ಷಣಾ ವ್ಯವಸ್ಥೆ ಮತ್ತು ಕ್ರೂಸ್ ಕ್ಷಿಪಣಿ ತಾಣಗಳನ್ನು ಅಮೆರಿಕದ ಪಡೆಗಳು ಹೊಡೆದಿವೆ ಎಂದು CENTCOM ತಿಳಿಸಿದೆ.
ಇದರ ಬೆನ್ನಲ್ಲೇ, ಕುವೈತ್ ನ ಅಲಿ ಅಲ್ ಸಲೇಂ ವಾಯುನೆಲೆಯಲ್ಲಿರುವ ಅಮೆರಿಕದ ಪಡೆಗಳ ಮೇಲೆ ಸಂಯೋಜಿತ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.
IRIB ಪ್ರಸಾರ ಮಾಡಿದ ಹೇಳಿಕೆಯಲ್ಲಿ, ‘ನಾಸ್ರ್–2’ ಕಾರ್ಯಾಚರಣೆಯ ಎಂಟನೇ ಹಂತದಲ್ಲಿ ಸಿ–ರಾಮ್ ಮುನ್ನೆಚ್ಚರಿಕೆ ರಾಡಾರ್ ವ್ಯವಸ್ಥೆ ಹಾಗೂ ಅಮೆರಿಕದ ಸೈನಿಕರು ಒಟ್ಟುಗೂಡಿದ್ದ ಸ್ಥಳವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು IRGC ತಿಳಿಸಿದೆ.
ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕ ಕುವೈತ್ ನ ಭೂಭಾಗವನ್ನು ಬಳಸುತ್ತಿದೆ ಎಂದು ಆರೋಪಿಸಿರುವ IRGC, ದೇಶದಿಂದ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ಕುವೈತ್ನ ನಾಗರಿಕರಿಗೆ ಕರೆ ನೀಡಿದೆ.
ಇದೇ ವೇಳೆ, ಜೋರ್ಡಾನ್ನ ಅಝ್ರಾಕ್ ವಾಯುನೆಲೆಯಲ್ಲಿರುವ ಅಮೆರಿಕದ ಸೇನಾ ಸೌಲಭ್ಯಗಳ ಮೇಲೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಸೇನೆ ಹೇಳಿಕೊಂಡಿದೆ.
ಫಾರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಅಮೆರಿಕದ ಸೇನೆಯ ಸಂವಹನ ವ್ಯವಸ್ಥೆಗಳು, ಸ್ಥಿರ ರಾಡಾರ್ ಕೇಂದ್ರ ಹಾಗೂ ಇಂಧನ ಸಂಗ್ರಹ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಈ ದಾಳಿಯು ತನ್ನ ‘ಸೇಕ್’ ಕಾರ್ಯಾಚರಣೆಯ ಒಂಭತ್ತನೇ ಹಂತವಾಗಿದ್ದು, ಇರಾನ್ ಮೇಲಿನ ಇತ್ತೀಚಿನ ಅಮೆರಿಕದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಕೈಗೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ. ಇರಾನ್ಶಹರ್ ನ ಬಂಪುರ ಬ್ಯಾರಕ್ ಗಳ ಮೇಲೆ ನಡೆದ ದಾಳಿಯಲ್ಲಿ 7 ಸೈನಿಕರು ಮೃತಪಟ್ಟಿದ್ದರು ಎಂದು ಅದು ಆರೋಪಿಸಿದೆ.
ಈ ನಡುವೆ, ಇರಾನ್ನ ಸೆಮ್ನಾನ್ ವಿಮಾನ ನಿಲ್ದಾಣದ ಕೆಲವು ಭಾಗಗಳು ಶತ್ರುಗಳ ವಾಯುದಾಳಿಗೆ ಗುರಿಯಾಗಿವೆ ಎಂದು IRIB ವರದಿ ಮಾಡಿದೆ.
ಉತ್ತರ–ಮಧ್ಯ ಪ್ರಾಂತ್ಯದ ಬಿಕ್ಕಟ್ಟು ನಿರ್ವಹಣಾ ಕೇಂದ್ರದ ವಕ್ತಾರರನ್ನು ಉಲ್ಲೇಖಿಸಿರುವ ವರದಿ, ತುರ್ತು ಸೇವೆಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸೆಮ್ನಾನ್ನ ಯಾವುದೇ ನಗರ ಅಥವಾ ಗ್ರಾಮಗಳಲ್ಲಿನ ವಸತಿ ಪ್ರದೇಶಗಳಿಗೆ ದಾಳಿ ನಡೆದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.






