ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲು ಅಮೆರಿಕ ನೌಕಾಪಡೆ ಸಿದ್ಧ: ಶ್ವೇತಭವನ

ಸಾಂದರ್ಭಿಕ ಚಿತ್ರ | Photo Credit : NDTV
ವಾಷಿಂಗ್ಟನ್: ಅಗತ್ಯವಿದ್ದರೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ ಗಳಿಗೆ ಅಮೆರಿಕ ನೌಕಾಪಡೆ ಬೆಂಗಾವಲು ನೀಡಲು ಸಿದ್ಧವಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಗತ್ಯವಿದ್ದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಟ್ಯಾಂಕರ್ಗಳಿಗೆ ಸುರಕ್ಷತಾ ಬೆಂಗಾವಲು ಒದಗಿಸುವ ಕಾರ್ಯವನ್ನು ಅಮೆರಿಕ ನೌಕಾಪಡೆಗೆ ವಹಿಸುವುದಾಗಿ ಹೇಳಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.
ಯುದ್ಧದ ಪರಿಸ್ಥಿತಿಯಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಈ ಆಯಕಟ್ಟಿನ ಜಲಮಾರ್ಗವನ್ನು ಮುಚ್ಚಲಾಗಿದೆ ಎಂದು ಘೋಷಿಸಿದೆ. ಅಲ್ಲಿಂದ ಹಾದುಹೋಗುವ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
ಗಲ್ಫ್ ಪ್ರದೇಶದಲ್ಲಿ ಅಥವಾ ಅದರ ಸಮೀಪ ಸಂಚರಿಸುವ ಕಚ್ಚಾ ತೈಲ ಸಾಗಣೆ ಟ್ಯಾಂಕರ್ಗಳು ಮತ್ತು ಸರಕು ಹಡಗುಗಳಿಗೆ ಯುನೈಟೆಡ್ ಸ್ಟೇಟ್ಸ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಮೂಲಕ ‘ಬಹಳ ಸಮಂಜಸವಾದ ಬೆಲೆಯಲ್ಲಿ’ ರಾಜಕೀಯ ಅಪಾಯ ವಿಮೆ ಪಡೆಯುವ ಅವಕಾಶ ಲಭ್ಯವಾಗಲಿದೆ ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ ಎಂದು ಲೀವಿಟ್ ತಿಳಿಸಿದ್ದಾರೆ.




