ಬಹರೈನ್ನ ಜನವಸತಿ ಪ್ರದೇಶದ ಮೇಲೆ ದಾಳಿ ನಡೆಸಿದ ಕ್ಷಿಪಣಿ ಅಮೆರಿಕದ ವಾಯುರಕ್ಷಣಾ ವ್ಯವಸ್ಥೆಯಿಂದ ಹಾರಿಸಲ್ಪಟ್ಟಿರುವ ಸಾಧ್ಯತೆ ಇದೆ : ವರದಿ

ಸಾಂದರ್ಭಿಕ ಚಿತ್ರ (credit: livemint.com)
ಬಹರೈನ್: ಈ ತಿಂಗಳ ಆರಂಭದಲ್ಲಿ ಬಹರೈನ್ನ ಮಹಾಝ್ಝಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡು ಮನೆಗಳಿಗೆ ಹಾನಿ ಉಂಟು ಮಾಡಿದ ಸ್ಫೋಟಕ್ಕೆ ಕಾರಣವಾದ ಕ್ಷಿಪಣಿಯನ್ನು ಇರಾನ್ ಬದಲು ಅಮೆರಿಕದ ಪೇಟ್ರಿಯಾಟ್ ವಾಯು ರಕ್ಷಣಾ ಬ್ಯಾಟರಿ ಹಾರಿಸಿರುವ ಕುರಿತು ಸಂಶೋಧಕರ ಅನುಮಾನವನ್ನು ಉಲ್ಲೇಖಿಸಿ livemint ವರದಿ ಮಾಡಿದೆ.
ಮಾರ್ಚ್ 9 ರ ಸ್ಫೋಟಕ್ಕೆ ಇರಾನಿನ ಡ್ರೋನ್ ದಾಳಿಯೇ ಕಾರಣ ಎಂದು ಬಹರೈನ್ ಮತ್ತು ಅಮೆರಿಕ ಆರೋಪಿಸಿತ್ತು. ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ 32 ಜನರು ಗಾಯಗೊಂಡಿದ್ದಾರೆ ಎಂದು ಬಹರೈನ್ ಹೇಳಿತ್ತು. ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಯುಎಸ್ ಸೆಂಟ್ರಲ್ ಕಮಾಂಡ್, ಇರಾನಿನ ಡ್ರೋನ್ ಬಹರೈನ್ನ ವಸತಿ ಪ್ರದೇಶದ ಮೇಲೆ ಅಪ್ಪಳಿಸಿದೆ ಎಂದು ಹೇಳಿತ್ತು. ಘಟನೆಯಲ್ಲಿ ಇರಾನಿನ ಡ್ರೋನ್ ಭಾಗಿಯಾಗಿದೆ ಎಂಬುದಕ್ಕೆ ಬಹರೈನ್ ಅಥವಾ ಅಮೆರಿಕ ಪುರಾವೆಗಳನ್ನು ಒದಗಿಸಿರಲಿಲ್ಲ.
ಆದರೆ ಇದೇ ಮೊದಲ ಬಾರಿಗೆ ರಾಜಧಾನಿ ಮನಾಮ ಹೊರವಲಯದ ಸಿತ್ರಾ ದ್ವೀಪದಲ್ಲಿರುವ ಮಹಾಝಾ ಪ್ರದೇಶದ ಮೇಲೆ ನಡೆದ ಸ್ಫೋಟದಲ್ಲಿ ಪೇಟ್ರಿಯಾಟ್ ಕ್ಷಿಪಣಿ ಭಾಗಿಯಾಗಿದೆ ಎಂದು ಬಹರೈನ್ ಒಪ್ಪಿಕೊಂಡಿದೆ. ಈ ಪ್ರದೇಶದಲ್ಲಿ ತೈಲ ಸಂಸ್ಕರಣಾಗಾರವೂ ಇದೆ.
ಸಂಶೋಧಕರಾದ ಸ್ಯಾಮ್ ಲೇರ್ ಮತ್ತು ಮೈಕಲ್ ಡ್ಯೂಟ್ಸ್ಮನ್ ಮತ್ತು ಮೊಂಟೆರೇಯಲ್ಲಿನ ಮಿಡ್ಲ್ಬರಿ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ನ ಪ್ರೊಫೆಸರ್ ಜೆಫ್ರಿ ಲೂಯಿಸ್ ಅವರ ಪ್ರಕಾರ, ಸಂಶಯಾಸ್ಪದ ಕ್ಷಿಪಣಿ ಮಹಾಝ್ಝ ಪ್ರದೇಶದ ನೈರುತ್ಯಕ್ಕೆ ಸುಮಾರು 7 ಕಿಮೀ ದೂರದಲ್ಲಿರುವ ಅಮೆರಿಕದ ಪ್ಯಾಟ್ರಿಯಟ್ ಬ್ಯಾಟರಿಯಿಂದಲೇ ಹಾರಿಸಲ್ಪಟ್ಟಿರಬಹುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಶೋಧಕರ ಈ ವಿಮರ್ಶೆಯು ಓಪನ್-ಸೋರ್ಸ್ ದೃಶ್ಯಗಳು ಮತ್ತು ವಾಣಿಜ್ಯ ಉಪಗ್ರಹ ಚಿತ್ರಗಳ ಪರಿಶೀಲನೆ ಆಧರಿತವಾಗಿದೆ ಎಂದು ಹೇಳಲಾಗಿದೆ.
ಆರ್ಟಿಎಕ್ಸ್ ಕಾರ್ಪ್ನ ಭಾಗವಾದ ರೇಥಿಯಾನ್ ನಿರ್ಮಿಸಿದ ಪೇಟ್ರಿಯಾಟ್, ಯುಎಸ್ ಮತ್ತು ಮಿತ್ರಪಕ್ಷಗಳ ವಾಯು ರಕ್ಷಣೆಯ ಬೆನ್ನೆಲುಬಾಗಿದೆ.
ಸಂಶೋಧಕರು ಕ್ಷಿಪಣಿಯ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ಲಭ್ಯವಿರುವ ಸಾಕ್ಷ್ಯಗಳು, ವಿಶೇಷವಾಗಿ ನೆಲದ ಮೇಲೆ ಕಂಡುಬಂದ ಹಾನಿಯ ಮಾದರಿ ಮತ್ತು ವ್ಯಾಪ್ತಿಯನ್ನು ಗಮನಿಸಿದರೆ, ಕ್ಷಿಪಣಿ ಆಕಾಶದಲ್ಲೇ ಸ್ಫೋಟಗೊಂಡಿರಬಹುದು ಎಂದು ತಿಳಿಸಿದ್ದಾರೆ.







