ಅಮೆರಿಕ : ಟೇಕಾಫ್ ವೇಳೆ ರನ್ವೇಗೆ ನುಗ್ಗಿದ ವ್ಯಕ್ತಿಗೆ ವಿಮಾನ ಢಿಕ್ಕಿ; ಸಾವು, 17 ಮಂದಿಗೆ ಗಾಯ!

Photo: x.com/PressTVR
ಡೆನ್ವರ್: ಅಮೆರಿಕದ ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ರಾಂಟಿಯರ್ ಏರ್ಲೈನ್ಸ್ನ ವಿಮಾನವೊಂದು ಟೇಕಾಫ್ ಆಗುತ್ತಿದ್ದ ವೇಳೆ ಅಕ್ರಮವಾಗಿ ರನ್ವೇ ಪ್ರವೇಶಿಸಿದ ವ್ಯಕ್ತಿಯೊಬ್ಬನಿಗೆ ವಿಮಾನ ಢಿಕ್ಕಿ ಹೊಡೆದು ಆತ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ 17 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ಸುತ್ತುಬೇಲಿಯನ್ನು ಹಾರಿ ರನ್ವೇಗೆ ಓಡಿಬಂದ ವ್ಯಕ್ತಿಗೆ ಫ್ರಾಂಟಿಯರ್ 4345 ವಿಮಾನ ಡಿಕ್ಕಿ ಹೊಡೆದಿದೆ ಎಂದು ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
“ಡಿಇಎನ್ನಲ್ಲಿ ಟೇಕಾಫ್ ವೇಳೆ ಫ್ರಾಂಟಿಯರ್ 4345 ವಿಮಾನ ಡಿಕ್ಕಿ ಹೊಡೆದಿದೆ. ತುರ್ತು ಸಹಾಯ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದಾರೆ. ಪ್ರಯಾಣಿಕರನ್ನು ತಕ್ಷಣ ಬಸ್ಸಿನಲ್ಲಿ ಟರ್ಮಿನಲ್ಗೆ ಕರೆದೊಯ್ಯಲಾಗಿದ್ದು, ಬಹುತೇಕ ಮಂದಿ ಹೊಸ ಫ್ರಾಂಟಿಯರ್ ವಿಮಾನದಲ್ಲಿ ಪ್ರಯಾಣ ಮುಂದುವರಿಸಿದರು. ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿ ರನ್ವೇ ದಾಟುತ್ತಿದ್ದಾಗ ಟೇಕಾಫ್ ಆಗುತ್ತಿದ್ದ ವಿಮಾನ ಆತನಿಗೆ ಡಿಕ್ಕಿ ಹೊಡೆದಿದೆ” ಎಂದು ಪ್ರಕಟಣೆ ತಿಳಿಸಿದೆ.
ವಿಮಾನ ಡಿಕ್ಕಿ ಹೊಡೆದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ 17ಎನ್ ರನ್ವೇಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.






