10 ಜನರಿದ್ದ ಅಮೆರಿಕದ ವಿಮಾನ ಅಲಾಸ್ಕಾದಲ್ಲಿ ನಾಪತ್ತೆ : ಮುಂದುವರಿದ ಶೋಧ ಕಾರ್ಯ

ಸಾಂದರ್ಭಿಕ ಚಿತ್ರ
ಅಲಾಸ್ಕಾ : 10 ಜನರಿದ್ದ ಅಮೆರಿಕ ಮೂಲದ ವಿಮಾನ ಗುರುವಾರ ಮಧ್ಯಾಹ್ನ ಅಲಾಸ್ಕಾದ ನೋಮ್ ಬಳಿ ನಾಪತ್ತೆಯಾಗಿದ್ದು, ವಿಮಾನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಫ್ಲೈಟ್ ರಾಡಾರ್ ಮಾಹಿತಿಯನ್ನು ಹಂಚಿಕೊಂಡಿದ್ದು, ಸೆಸ್ನಾ 208ಬಿ ಗ್ರ್ಯಾಂಡ್ ಕ್ಯಾರವಾನ್ ವಿಮಾನ ರಾಡಾರ್ ನಿಂದ ಕಣ್ಮರೆಯಾಗುವ 39 ನಿಮಿಷಗಳ ಮೊದಲು ಅಂದರೆ ಗುರುವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ 2.37ಕ್ಕೆ ಅಲಾಸ್ಕನ್ ಪಟ್ಟಣವಾದ ಉನಾಲಕ್ಲೀಟ್ ನಿಂದ ಹೊರಟಿತ್ತು ಎಂದು ತಿಳಿಸಿದೆ.
ವಿಮಾನದಲ್ಲಿ ಪೈಲಟ್ ಸೇರಿದಂತೆ 10 ಮಂದಿ ಪ್ರಯಾಣಿಕರಿದ್ದರು. ನಾಪತ್ತೆಯಾದ ವಿಮಾನದ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅಲಾಸ್ಕಾದ ಸಾರ್ವಜನಿಕ ಸುರಕ್ಷತಾ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ.
ನೋಮ್ ಮತ್ತು ವೈಟ್ ಮೌಂಟೇನ್ ನಲ್ಲಿ ಸ್ಥಳೀಯರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹವಾಮಾನ ವೈಪರೀತ್ಯ ಮತ್ತು ಕಳಪೆ ಗೋಚರತೆಯಿಂದಾಗಿ ವಾಯು ಶೋಧ ಕಾರ್ಯಕ್ಕೆ ಅಡಚಣೆಯಾಗಿದೆ ಎಂದು ತಿಳಿದು ಬಂದಿದೆ.





