ಖತರ್ ನಲ್ಲಿರುವ ಮಿಲಿಟರಿ ನೆಲೆ ತೊರೆದ ಅಮೆರಿಕದ ವಿಮಾನಗಳು: ವರದಿ

pc : aljazeera.com
ದೋಹಾ: ಮಧ್ಯಪ್ರಾಚ್ಯದ ಪ್ರಮುಖ ಮಿಲಿಟರಿ ನೆಲೆಯಾದ ಖತರ್ ನ ದೋಹಾದ ಹೊರಗಿನ ಅಲ್ ಉದೈದ್ ವಾಯುನೆಲೆಯನ್ನು ತೊರೆದು, ಅಮೆರಿಕದ ವಿಮಾನಗಳು ಹಾರಿ ಹೋಗಿದೆ ಎಂದು ʼassociated pressʼ ವರದಿ ಮಾಡಿದೆ.
ಸಾಮಾನ್ಯವಾಗಿ ಅಲ್ ಉದೈದ್ ವಾಯುನೆಲೆಯ ರನ್ ವೇ ಪ್ರದೇಶದಲ್ಲಿ ವಿಮಾನಗಳು ಲ್ಯಾಂಡ್ ಆಗಿರುವುದು, ಹಾರಾಟ ನಡೆಸುತ್ತಿರುವುದು ಕಂಡು ಬರುತ್ತಿತ್ತು ಎನ್ನಲಾಗಿದೆ.
ಪ್ಲಾನೆಟ್ ಲ್ಯಾಬ್ಸ್ ಪಿಬಿಸಿ ಬುಧವಾರ ತೆಗೆದ ಮತ್ತು ಎಪಿ ವಿಶ್ಲೇಷಿಸಿದ ಉಪಗ್ರಹ ಚಿತ್ರದಲ್ಲಿ, ವಾಯುನೆಲೆಯ ರನ್ ವೇ ಪ್ರದೇಶವು ಖಾಲಿಯಾಗಿತ್ತು. ಈ ವಾಯುನೆಲೆಯು ಯಾವಾಗಲೂ ವಿಮಾನಗಳು, ಫೈಟರ್ ಜೆಟ್ಗಳು ಮತ್ತು ಡ್ರೋನ್ಗಳಿಂದ ತುಂಬಿರುತ್ತಿತ್ತು.
ಅಮೆರಿಕದ ಮಿಲಿಟರಿಯು ಈ ಬೆಳವಣಿಗೆಯನ್ನು ತಳ್ಳಿಹಾಕಿದೆ. ಬಹ್ರೇನ್ ನಲ್ಲಿರುವ ಯುಎಸ್ ನೌಕಾಪಡೆಯ 5 ನೇ ಫ್ಲೀಟ್ ಬೇಸ್ನಲ್ಲಿರುವ ಹಡಗುಗಳೂ ಆ ಪ್ರದೇಶವನ್ನು ತೊರೆದಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗುತ್ತಿರುವಾಗ ಈ ಬೆಳವಣಿಗೆ ನಡೆದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ದಾಳಿಯ ಸಂದರ್ಭದಲ್ಲಿ ಹಡಗುಗಳು ಮತ್ತು ವಿಮಾನಗಳು ನಾಶವಾಗದಂತೆ ನೋಡಿಕೊಳ್ಳಲು ಈ ಕ್ರಮಗಳು ಸಾಮಾನ್ಯವಾಗಿ ಮಿಲಿಟರಿ ತಂತ್ರವಾಗಿದೆ ಎಂದು ರಕ್ಷಣಾ ತಂತ್ರಜ್ಞರು ವಿಶ್ಲೇಷಿಸಿದ್ದಾರೆ.







