ಮಧ್ಯಪ್ರಾಚ್ಯಕ್ಕೆ ಥಿಯೋಡೋರ್ ರೂಸ್ವೆಲ್ಟ್ ಸಮರನೌಕೆ ನಿಯೋಜಿಸಲು ಅಮೆರಿಕ ಸಿದ್ಧತೆ: ವರದಿ

Photo Credit : X
ವಾಶಿಂಗ್ಟನ್: ಇರಾನ್ ಜೊತೆಗಿನ ಶಾಂತಿ ಮಾತುಕತೆಯನ್ನು ಪುನರಾರಂಭಿಸಲು ಅಮೆರಿಕಕ್ಕೆ ಯಾವುದೇ ಅವಸರವಿಲ್ಲ ಮತ್ತು `ಅಗತ್ಯವಿರುವಷ್ಟು ಕಾಲ' ಆರ್ಥಿಕ ಯುದ್ಧವನ್ನು ಮುಂದುವರಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಪಥ ಮಾಡಿದ ನಂತರ, ಅಮೆರಿಕವು ಮಧ್ಯಪ್ರಾಚ್ಯಕ್ಕೆ ಮತ್ತೊಂದು ವಿಮಾನ ವಾಹಕ ನೌಕೆಯನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಯುಎಸ್ಎಸ್ ಥಿಯೋಡೋರ್ ರೂಸ್ವೆಲ್ಟ್ ವಿಮಾನ ವಾಹಕ ನೌಕೆ ಮತ್ತು ಅದರ 5,000 ಸಿಬ್ಬಂದಿಗಳ ತಂಡವನ್ನು ಮಧ್ಯಪ್ರಾಚ್ಯದಲ್ಲಿ ಕನಿಷ್ಠ ಏಳು ತಿಂಗಳ ಕಾಲ ನಿಯೋಜಿಸಲಾಗುವುದು ಎಂದು ಹಿರಿಯ ಅಮೆರಿಕ ನೌಕಾಪಡೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ವಿಮಾನ ವಾಹಕ ನೌಕೆ ಥಿಯೋಡೋರ್ ರೂಸ್ವೆಲ್ಟ್ ಮತ್ತು ಅದರ 5,000 ಸಿಬ್ಬಂದಿಗಳ ತಂಡವು ಮುಂಬರುವ ವಾರಗಳಲ್ಲಿ ಮಧ್ಯಪ್ರಾಚ್ಯಕ್ಕೆ ಕನಿಷ್ಠ ಏಳು ತಿಂಗಳ ನಿಯೋಜನೆಗೆ ತೆರಳಲಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಅಮೆರಿಕದ ನೌಕಾಪಡೆಯು ಯುದ್ಧ ಮತ್ತು ಜಾಗತಿಕ ಜವಾಬ್ದಾರಿಗಳಿಂದಾಗಿ ಒತ್ತಡವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. ಅಮೆರಿಕದ ಆರ್ಥಿಕ ಶಕ್ತಿಯು ದೇಶವನ್ನು ಬಹಳ ದೊಡ್ಡ ವಿಜಯದತ್ತ ಕೊಂಡೊಯ್ಯುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.






