"ಒಪ್ಪಂದ ಮಾಡಿಕೊಳ್ಳಿ, ಒತ್ತೆಯಾಳುಗಳನ್ನು ಮರಳಿ ಪಡೆದುಕೊಳ್ಳಿ": ಗಾಝಾ ಕದನ ವಿರಾಮಕ್ಕೆ ಟ್ರಂಪ್ ಕರೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo credit: PTI)
ಟೆಲ್ ಅವಿವ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ಕಡೆಗಳು ಒಪ್ಪಂದಕ್ಕೆ ನಿಕಟವಾಗುತ್ತಿರುವಂತೆ ಕಂಡು ಬಂದಿರುವುದರಿಂದ ಗಾಝಾ ಯುದ್ಧದಲ್ಲಿ ಕದನ ವಿರಾಮ ಮಾತುಕತೆಗಳಲ್ಲಿ ಪ್ರಗತಿಗೆ ರವಿವಾರ ಮನವಿ ಮಾಡಿಕೊಂಡಿದ್ದಾರೆ. 20 ತಿಂಗಳ ಸಂಘರ್ಷಕ್ಕೆ ಅಂತ್ಯ ಹಾಡುವ ಒಪ್ಪಂದಕ್ಕೆ ಅವರು ಕರೆ ನೀಡಿದ್ದಾರೆ.
ಈ ನಡುವೆ ಮುಂದಿನ ವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಾಷಿಂಗ್ಟನ್ ಭೇಟಿಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಇಸ್ರೇಲಿ ಅಧಿಕಾರಿಯೋರ್ವರು ತಿಳಿಸಿದರು. ನೆತನ್ಯಾಹು ಅವರ ಅಮೆರಿಕ ಭೇಟಿಯ ಉದ್ದೇಶವನ್ನು ಚರ್ಚಿಸಲು ಅವರು ನಿರಾಕರಿಸಿದರು.
‘ಗಾಝಾದಲ್ಲಿ ಒಪ್ಪಂದ ಮಾಡಿಕೊಳ್ಳಿ. ಒತ್ತೆಯಾಳುಗಳನ್ನು ಮರಳಿ ಪಡೆದುಕೊಳ್ಳಿ’ ಎಂದು ಟ್ರಂಪ್ ರವಿವಾರ ತನ್ನ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುಥ್ನಲ್ಲಿಯ ಪೋಸ್ಟ್ನಲ್ಲಿ ಬರೆದಿದ್ದಾರೆ.
ಮುಂದಿನ ವಾರ ಕದನ ವಿರಾಮ ಒಪ್ಪಂದ ಏರ್ಪಡಬಹುದು ಎಂದು ಹೇಳುವ ಮೂಲಕ ಟ್ರಂಪ್ ಶುಕ್ರವಾರ ಒಪ್ಪಂದದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು.
ಗಾಝಾದಲ್ಲಿ ಯುದ್ಧವನ್ನು ಅಂತ್ಯಗೊಳಿಸುವಂತೆ ಟ್ರಂಪ್ ಇಸ್ರೇಲ್ ಮತ್ತು ಹಮಾಸ್ಗೆ ಪದೇಪದೇ ಕರೆಯನ್ನು ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಾಗಲೇ ಎಂಟು ವಾರಗಳ ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತಾದರೂ ಅಂದಿನಿಂದ ಹೊಸ ಒಪ್ಪಂದಕ್ಕೆ ಉಭಯ ಪಕ್ಷಗಳನ್ನು ಒಪ್ಪಿಸುವ ಪ್ರಯತ್ನಗಳು ವಿಫಲಗೊಂಡಿವೆ.







