ಅಮೆರಿಕ ಅಧ್ಯಕ್ಷೀಯ ಚುನಾವಣೆ | ಕಮಲಾ ಹ್ಯಾರಿಸ್ ಗೆ ಸುಂದರ್ ಪಿಚೈ ಬೆಂಬಲ: ಗೂಗಲ್ ವಿರುದ್ಧ ಟ್ರಂಪ್ ಬಣದ ಆರೋಪ
ಸುಂದರ್ ಪಿಚೈ PC: PTI | ಕಮಲಾ ಹ್ಯಾರಿಸ್ PC: fb.com
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಂತೆಯೇ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗಳೆನಿಸಿದ ಅಲ್ಫಾಬೆಟ್/ಗೂಗಲ್ ಮತ್ತು ಎಕ್ಸ್, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ನರ ನಡುವಿನ ವಾಕ್ಸಮರ ವೇದಿಕೆಗಳಾಗಿ ಪರಿವರ್ತನೆಯಾಗುತ್ತಿವೆ. ಈ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವ ಸುಂದರ್ ಪಿಚೈ ಹಾಗೂ ಎಲಾನ್ ಮಸ್ಕ್ ಅವರನ್ನೂ ಉಭಯ ಪಕ್ಷಗಳ ನಡುವಿನ ಹಗೆತನದ ಕಾಳಗಕ್ಕೆ ಎಳೆಯಲಾಗುತ್ತಿದೆ. ಮಸ್ಕ್ ಈಗಾಗಲೇ ಟ್ರಂಪ್ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದು, ಭಾರತೀಯ ಸಂಜಾತ ಸುಂದರ್ ಪಿಚೈ ವಿರುದ್ಧ ಟ್ರಂಪ್ ಬೆಂಬಲಿಗರು ಕಿಡಿ ಕಾರಿದ್ದಾರೆ. ಮಾಜಿ ಅಧ್ಯಕ್ಷ ಟ್ರಂಪ್ ಅವರ ಹತ್ಯೆ ಪ್ರಯತ್ನದ ಬಗ್ಗೆ ಗೂಗಲ್ ನ ಆಟೊಕಂಪ್ಲೀಟ್ ಫಂಕ್ಷನ್ ಯಾವುದೇ ಮಾಹಿತಿ ನೀಡುತ್ತಿಲ್ಲ ಎನ್ನುವುದು ಇವರ ಆರೋಪ.
"ಹತ್ಯೆ ಪ್ರಯತ್ನ" ಎಂಬ ಶಬ್ದಗುಚ್ಛಗಳನ್ನು ಗೂಗಲ್ ಸರ್ಚ್ ನಲ್ಲಿ ಹಾಕಿದಾಗ ರೊನಾಲ್ಡ್ ರೇಗನ್ ಮತ್ತು ಜಾನ್ ಎಫ್ ಕೆನಡಿ ಅವರ ಹೆಸರು ಸ್ವಯಂ ಪೂರ್ಣಗೊಳ್ಳುವ ವೈಶಿಷ್ಟ್ಯದಲ್ಲಿ ಬರುತ್ತವೆ. ಆದರೆ ಟ್ರಂಪ್ ಹೆಸರು ಬರುತ್ತಿಲ್ಲ. ಇದು ಟ್ರಂಪ್ ಬೆಂಬಲಿಗರನ್ನು ಕೆರಳಿಸಿದೆ. ಗೂಗಲ್ ಸಂಸ್ಥೆಯ ಬಗ್ಗೆ ಅಮೆರಿಕದ ಸಂಸದೀಯ ತನಿಖೆ ಆರಂಭಿಸುವುದಾಗಿ ರಿಪಬ್ಲಿಕನ್ ಪಕ್ಷದ ಸಂಸದರೊಬ್ಬರು ಹೇಳಿದ್ದಾರೆ.
"ಟ್ರಂಪ್ ಹತ್ಯೆ ಪ್ರಯತ್ನವನ್ನು ಗೂಗಲ್ ಏಕೆ ಹತ್ತಿಕ್ಕುತ್ತಿದೆ? ಕಳೆದ ಎರಡು ವಾರಗಳಲ್ಲಿ (ಹ್ಯಾರಿ) ಟ್ರೂಮನ್ ಅವರ ವ್ಯಕ್ತಿ ಚಿತ್ರಗಾರರು ಗಣನೀಯವಾಗಿ ಹೆಚ್ಚಾಗಿದ್ದಾರೆಯೇ? ಎಂದು ರಿಪಬ್ಲಿಕನ್ ಸೆನೆಟ್ ಸದಸ್ಯ ರೋಜರ್ ಮಾರ್ಷಲ್ ಪ್ರಶ್ನಿಸಿದ್ದಾರೆ. "ಹತ್ಯೆ ಪ್ರಯತ್ನ" ಎಂದು ಹುಡುಕಿದಾಗ ಟ್ರೂಪನ್ ಅವರ ಹೆಸರು ಬರುತ್ತಿದ್ದು, ಟ್ರಂಪ್ ಅವರ ಹೆಸರು ಬರುತ್ತಿಲ್ಲ ಎಂದು ಅವರು ಸ್ಕ್ರೀನ್ ಶಾಟ್ ಹಂಚಿಕೊಳ್ಳುವ ಮೂಲಕ ಆಪಾದಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರಿಗೆ ನೆರವಾಗುವ ಸಲುವಾಗಿ ಗೂಗಲ್ ಮತ್ತೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಟ್ರಂಪ್ ಪುತ್ರ ಆಪಾದಿಸಿದ್ದಾರೆ. ಜೋ ಬೈಡನ್ ಅವರ ಹದಗೆಟ್ಟ ಆಡಳಿತ ವ್ಯವಸ್ಥೆ ಮತ್ತು ಹಗರಣಗಳ ಆರೋಪ ಎದುರಿಸುತ್ತಿರುವ ಅವರ ಪುತ್ರ ಹಂಟರ್ ಬೈಡನ್ ಬಗೆಗಿನ ಮಾಹಿತಿಯನ್ನು ಗೂಗಲ್ ಹತ್ತಿಕ್ಕುತ್ತಿದೆ ಎಂದು ಟ್ರಂಪ್ ಬೆಂಬಲಿಗರು ಆರೋಪಿಸುತ್ತಲೇ ಇದ್ದಾರೆ.
ಹ್ಯಾರಿಸ್ ಹಾಗೂ ಪಿಚೈ ಇಬ್ಬರೂ ಭಾರತೀಯ ಮೂಲದವರಾಗಿರುವುದರಿಂದ ಗೂಗಲ್, ಕಮಲಾ ಅವರನ್ನು ಬೆಂಬಲಿಸುತ್ತಿದೆ ಎಂದು ಕೆಲ ಟ್ರಂಪ್ ಬೆಂಬಲಿಗರು ಆರೋಪ ಮಾಡುತ್ತಿದ್ದಾರೆ.