ಗಾಝಾ ಒಪ್ಪಂದ ಗೌರವಿಸುವಂತೆ ನೆತನ್ಯಾಹು ಮೇಲೆ ಅಮೆರಿಕ ಒತ್ತಡ: ವರದಿ

ಡೊನಾಲ್ಡ್ ಟ್ರಂಪ್ , ಪ್ರಧಾನಿ ನೆತನ್ಯಾಹು | Photo Credit : aljazeera.com
ವಾಶಿಂಗ್ಟನ್, ನ. 26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಮತ್ತು ಗಾಝಾ ಶಾಂತಿ ಯೋಜನೆಯನ್ನು ಜಾರಿಗೊಳಿಸುವತ್ತ ಮುಂದುವರಿಯುವಂತೆ ಅಮೆರಿಕ ಅಧ್ಯಕ್ಷರ ಪ್ರತಿನಿಧಿ ಜೇರೆಡ್ ಕುಶ್ನರ್ ಅವರು ಇಸ್ರೇಲಿ ಪ್ರಧಾನಿ ನೆತನ್ಯಾಹು ಅವರ ಮೇಲೆ ಒತ್ತಡ ಹೇರಿದ್ದಾರೆ ಎಂದು 'ಆಕ್ಸಿಯೋಸ್' ವರದಿ ತಿಳಿಸಿದೆ.
ಒಪ್ಪಂದವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಕುಶ್ನರ್ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ. ಗಾಝಾ ಮಾರ್ಗಸೂಚಿಗಿಂತ ನೆತನ್ಯಾಹು ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಮತ್ತು ಒಪ್ಪಂದದ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಶ್ವೇತಭವನವು ತೀವ್ರ ಅಸಮಾಧಾನಗೊಂಡಿದೆ ಎಂದು ವರದಿ ತಿಳಿಸಿದೆ.
ಮತ್ತೊಂದೆಡೆ, ನೆತನ್ಯಾಹು ಅವರ ಪ್ರತಿಸ್ಪರ್ಧಿ ಗಾಡಿ ಐಸೆನ್ಕೋಟ್ ಅವರು ಟ್ರಂಪ್ ಅವರ ಗಾಝಾ ಯೋಜನೆಯನ್ನು ಜಾರಿಗೊಳಿಸುವುದಾಗಿ ಮತ್ತು 18 ತಿಂಗಳೊಳಗೆ ಆ ಪ್ರದೇಶವು ಹಮಾಸ್ ನಿಯಂತ್ರಣದಲ್ಲಿಲ್ಲದಂತೆ ನೋಡಿಕೊಳ್ಳುವುದಾಗಿ ತಮ್ಮ ಚುನಾವಣಾ ಪ್ರಚಾರದ ವೇಳೆ ಪ್ರತಿಜ್ಞೆ ಮಾಡಿದ್ದರು.
ಮುಂದಿನ ಇಸ್ರೇಲಿ ಪ್ರಧಾನಿ ಯಾರೇ ಆದರೂ, ಅವರು ಗಾಝಾ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ಆದ್ಯತೆ ನೀಡುತ್ತಾರೆ, ಏಕೆಂದರೆ ಬೇರೆ ಪರ್ಯಾಯ ಮಾರ್ಗವಿಲ್ಲ. ಗಾಝಾ ವಿಷಯಕ್ಕೆ ಆದ್ಯತೆ ನೀಡುವ ಕುರಿತು ಐಸೆನ್ಕೋಟ್ ತುಂಬಾ ಸಕಾರಾತ್ಮಕವಾಗಿ ಮಾತನಾಡಿದ್ದಾರೆ ಎಂದು ಕುಶ್ನರ್ ತಿಳಿಸಿದ್ದಾರೆ.






