ಭಾರತದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಆರೋಪ

Photo Credit : reuters.com
ವಾಷಿಂಗ್ಟನ್ : ಭಾರತದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ವೇಳೆ ದೇಶಾದ್ಯಂತ ಕೋಟ್ಯಂತರ ಜನರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪ್ರಕ್ರಿಯೆಯ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಕ್ರಮವನ್ನು ಭಾರತ ತೀವ್ರಗೊಳಿಸಿದೆ ಎಂದು ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಸಮಿತಿಯೊಂದು ಹೇಳಿದೆ.
ಭಾರತ ಸರಕಾರವು ಮುಸ್ಲಿಂರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ, ಅವರನ್ನು 'ವಿದೇಶಿಯರು' ಎಂದು ಕರೆದು ಮತ್ತು ಇದೀಗ ಅವರನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡುವ ಮೂಲಕ ಗುರಿಯಾಗಿಸುತ್ತಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಆಯೋಗದ (US Commission on International Religious Freedom) ಅಧ್ಯಕ್ಷ ಆಸಿಫ್ ಮಹಮೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 13 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಮೆಕ್ಸಿಕೊ ದೇಶದ ಜನಸಂಖ್ಯೆಗೆ ಸರಿಸಮಾನವಾಗಿದ್ದು, ಭಾರತದ ಇತಿಹಾಸದಲ್ಲೇ ಮತದಾರರ ಪಟ್ಟಿಯಿಂದ ಅತಿ ಹೆಚ್ಚು ಹೆಸರುಗಳನ್ನು ಅಳಿಸಿರುವುದಾಗಿದೆ.
ಈ ಪ್ರಕ್ರಿಯೆಯಿಂದ ಭಾರತದ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರು ಪ್ರಮಾಣದಲ್ಲಿ ಬಾಧಿತರಾಗಿದ್ದಾರೆ ಎಂದು ಅಂಕಿಅಂಶಗಳು ತೋರಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರು ವಿರುದ್ಧ ತಾರತಮ್ಯ ಹೆಚ್ಚಳವಾಗಿದೆ ಎಂದು ಆಯೋಗವು ತಿಳಿಸಿದೆ.
ಮತದಾರರ ಪಟ್ಟಿಯಲ್ಲಿನ ನಕಲಿ ಹೆಸರುಗಳು, ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಇತರ ಅರ್ಹತೆಗಳನ್ನು ಹೊಂದಿರದ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ. ತಪ್ಪಾಗಿ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದರೆ ಸಂಬಂಧಪಟ್ಟವರು ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದೂ ಆಯೋಗ ಹೇಳಿದೆ. ಈ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು, ಅಕ್ರಮ ವಲಸಿಗರೆಂದು ಶಂಕಿಸಲಾದವರನ್ನು ಗುರುತಿಸಿ ದೇಶದಿಂದ ಹೊರಹಾಕುವ ಪ್ರತ್ಯೇಕ ಅಭಿಯಾನವನ್ನು ಹೊಂದಿದೆ. ಆದರೆ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಿದ ಮಾತ್ರಕ್ಕೆ ಆ ವ್ಯಕ್ತಿ ವಿದೇಶಿ ಪ್ರಜೆ ಎಂದು ಹೇಳಲಾಗುವುದಿಲ್ಲ.
ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬ ಕಾರಣಕ್ಕೆ ಭಾರತ ಸರಕಾರವೇ ತನ್ನ ನಾಗರಿಕರನ್ನು ದೇಶದಿಂದ ಹೊರಹಾಕುತ್ತಿರುವುದು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಕ್ರಮಗಳಲ್ಲಿನ ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಅಮೆರಿಕದ ಆಯೋಗದ ಜೀನ್ ಮಿಲ್ಸ್ ಹೇಳಿದ್ದಾರೆ. ಭಾರತವನ್ನು 'ನಿರ್ದಿಷ್ಟ ಕಳವಳದ ದೇಶ' ಎಂದು ಘೋಷಿಸುವಂತೆ ಅವರು ಅಮೆರಿಕದ ವಿದೇಶಾಂಗ ಇಲಾಖೆಯನ್ನು ಒತ್ತಾಯಿಸಿದ್ದಾರೆ.
USCIRF ಜಗತ್ತಿನಾದ್ಯಂತ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನೀತಿ ಶಿಫಾರಸುಗಳನ್ನು ಮಾಡುವ ಅಮೆರಿಕ ಸರಕಾರದ ಆಯೋಗವಾಗಿದೆ. ಆದರೆ, ಈ ಆಯೋಗದ ಶಿಫಾರಸುಗಳು ಕಡ್ಡಾಯವಾಗಿ ಜಾರಿಗೊಳಿಸಬೇಕಾದವುಗಳಲ್ಲ. ಭಾರತಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಡಿರುವ ಶಿಫಾರಸುಗಳ ಮೇಲೆ ವಾಷಿಂಗ್ಟನ್ ಯಾವುದೇ ಕ್ರಮ ಕೈಗೊಂಡಿಲ್ಲ.
USCIRF ಪಕ್ಷಪಾತೀಯವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಈ ಹಿಂದೆ ಆರೋಪಿಸಿತ್ತು. ಇಂತಹ ಟೀಕೆಗಳನ್ನು ತಳ್ಳಿ ಹಾಕಿತ್ತು. ಇದನ್ನು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಎಂದು ಹೇಳಿತ್ತು.
ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಭಾರತದಲ್ಲಿ ಇತ್ತೀಚಿಗೆ ಪ್ರತಿಭಟನೆಗಳು ನಡೆದಿವೆ. ಈ ಪರಿಷ್ಕರಣೆಯಿಂದ ಬಿಜೆಪಿ ಪರ ಮತ ಚಲಾಯಿಸುವ ಸಾಧ್ಯತೆ ಕಡಿಮೆ ಇರುವ ಜನರು ಹೆಚ್ಚು ಬಾಧಿತರಾಗಿದ್ದಾರೆ ಎಂದು ಪ್ರತಿಪಕ್ಷಗಳು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಭಾರತ ಸರಕಾರ ಕೈಗೊಂಡ ಕ್ರಮಗಳನ್ನು ಮಾನವ ಹಕ್ಕುಗಳ ತಜ್ಞರು ಖಂಡಿಸಿದ್ದಾರೆ.
ಮೋದಿ ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಹೇಳಿದೆ. ದ್ವೇಷ ಭಾಷಣಗಳ ಹೆಚ್ಚಳ, ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಕಾನೂನು, ಮುಸ್ಲಿಮರ ಒಡೆತನದ ಆಸ್ತಿಗಳ ಧ್ವಂಸ, ಮುಸ್ಲಿಂ ಬಹುಸಂಖ್ಯಾತ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ರದ್ದುಗೊಳಿಸಿರುವುದು ಹಾಗೂ ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯಕ್ಕೆ ಸವಾಲೊಡ್ಡುವ ಮತಾಂತರ ವಿರೋಧಿ ಕಾನೂನುಗಳನ್ನು ಇದಕ್ಕೆ ಉದಾಹರಣೆಯಾಗಿ ಅವು ಉಲ್ಲೇಖಿಸಿವೆ.
ಆದರೆ, ತಾರತಮ್ಯ ಮಾಡುತ್ತಿರುವ ಆರೋಪವನ್ನು ಭಾರತದ ಸರಕಾರ ನಿರಾಕರಿಸಿದೆ. ಆಹಾರ ಸಬ್ಸಿಡಿ ಯೋಜನೆಗಳು ಮತ್ತು ವಿದ್ಯುದೀಕರಣ ಅಭಿಯಾನಗಳು ಸೇರಿದಂತೆ ಸರಕಾರದ ನೀತಿಗಳು ಎಲ್ಲ ಸಮುದಾಯಗಳಿಗೂ ಪ್ರಯೋಜನ ನೀಡುತ್ತವೆ ಎಂದು ಸರಕಾರ ಹೇಳಿದೆ.
ಇದೇ ವೇಳೆ, ಅಮೆರಿಕದಲ್ಲಿಯೂ ಮುಸ್ಲಿಮರ ವಿರುದ್ಧದ ವರ್ತನೆಯನ್ನು ನಾಗರಿಕ ಹಕ್ಕುಗಳ ಪರ ಹೋರಾಟಗಾರರು ಟೀಕಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಇದಲ್ಲದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ನಾಯಕರಿಂದ ಮುಸ್ಲಿಂ ವಿರೋಧಿ ಹೇಳಿಕೆಗಳು ಹೆಚ್ಚುತ್ತಿರುವುದನ್ನೂ ಉಲ್ಲೇಖಿಸಿದ್ದಾರೆ.






