ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹಿಮ್ಮೆಟ್ಟಿಸಲು ಚೀನಾ ವಿದ್ಯುತ್ಕಾಂತೀಯ ಅಸ್ತ್ರ ಬಳಸಿತ್ತು : ಅಮೆರಿಕದ ರಿಪಬ್ಲಿಕನ್ ಸೆನೆಟರ್ ವಿಲಕ್ಷಣ ಹೇಳಿಕೆ

Photo | AFP
ಹೊಸದಿಲ್ಲಿ,ಸೆ.12: ಅಮೆರಿಕದ ರಿಪಬ್ಲಿಕನ್ ಸೆನೆಟರ್ ಬಿಲ್ ಹ್ಯಾಗೆರ್ಟಿ (ಟೆನ್ನೆಸ್ಸಿ) ಅವರು ಐದು ವರ್ಷಗಳ ಹಿಂದೆ ಗಡಿ ವಿವಾದದ ಸಂದರ್ಭದಲ್ಲಿ ಭಾರತೀಯ ಯೋಧರನ್ನು ಹಿಮ್ಮೆಟ್ಟಿಸಲು ಚೀನಾ ವಿದ್ಯುತ್ಕಾಂತೀಯ ಅಸ್ತ್ರವನ್ನು ಬಳಸಿತ್ತು ಎಂಬ ವಿಲಕ್ಷಣ ಹೇಳಿಕೆಯನ್ನು ನೀಡಿದ್ದಾರೆ.
ಅಮೆರಿಕ-ಭಾರತ ಸಂಬಂಧಗಳ ಕುರಿತು ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಹ್ಯಾಗರ್ಟಿ ಘಟನೆಯು 2020ರ ಗಲ್ವಾನ್ ಕಣಿವೆ ಘರ್ಷಣೆಗೆ ಸಂಬಂಧಿಸಿರಬಹುದು ಎಂದು ಹೇಳಿದರಾದರೂ ನಿಖರವಾಗಿ ಅದನ್ನು ಹೆಸರಿಸಲಿಲ್ಲ.
ಚೀನಾ ಮತ್ತು ಭಾರತ ದೂರುಗಳು ಹಾಗೂ ಅಪನಂಬಿಕೆಯ ದೀರ್ಘ ಇತಿಹಾಸವನ್ನು ಹೊಂದಿವೆ. ಕೇವಲ ಐದು ವರ್ಷಗಳ ಹಿಂದೆ ಚೀನಾ ಮತ್ತು ಭಾರತ ವಿವಾದಿತ ಗಡಿಯ ಕುರಿತು ಕಾದಾಡುತ್ತಿದ್ದವು ಮತ್ತು ಚೀನಾ ಭಾರತಿಯ ಯೋಧರನ್ನು ಅಕ್ಷರಶಃ ಹಿಮ್ಮೆಟ್ಟಿಸಲು ವಿದ್ಯುತ್ಕಾಂತೀಯ ಅಸ್ತ್ರವನ್ನು ಬಳಸಿತ್ತು ಎಂದು ಪ್ರತಿಪಾದಿಸಿದರು.
ಟಿಯಾನ್ಜಿನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ(ಎಸ್ಇಒ)ಯ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನಡುವೆ ಮಾತುಕತೆಗಳ ಬಳಿಕ ಹ್ಯಾಗರ್ಟಿ ಅವರ ಈ ಹೇಳಿಕೆಗಳು ಹೊರಬಿದ್ದಿವೆ. ಅವರು ತನ್ನ ಹೇಳಿಕೆಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಹೇಗೆ ಕಾಲಕಾಲಕ್ಕೆ ಬದಲಾಗುತ್ತವೆ ಎನ್ನುವುದನ್ನು ಎತ್ತಿ ತೋರಿಸಲು ಯತ್ನಿಸಿದ್ದರು.
ಅಮೆರಿಕದ ಟ್ರಂಪ್ ಆಡಳಿತವು ಸುಂಕಗಳನ್ನು ಹೆಚ್ಚಿಸಿದ ಬಳಿಕ ಭಾರತ ಮತ್ತು ಚೀನಾ ತಮ್ಮ ನಡುವಿನ ಸಂಬಂಧಗಳನ್ನು ಮರುನಿರ್ಮಿಸಲು ಪ್ರಯತ್ನಿಸುತ್ತಿವೆ.







