ಗಾಝಾ ಕದನ ವಿರಾಮ ಯೋಜನೆಗೆ ಇಸ್ರೇಲ್ ಸಮ್ಮತಿ: ಅಮೆರಿಕ
ಪ್ರಸ್ತಾವವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ ಹಮಾಸ್

PC : reuters.com
ವಾಷಿಂಗ್ಟನ್: ಅಮೆರಿಕದ ಗಾಝಾ ಕದನ ವಿರಾಮ ಪ್ರಸ್ತಾವವನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಶ್ವೇತಭವನವು ತಿಳಿಸಿದೆ. ಆದರೆ,ಷರತ್ತುಗಳು ತನ್ನ ಬೇಡಿಕೆಗಳನ್ನು ಪೂರೈಸಿಲ್ಲವಾದರೂ ಯೋಜನೆಯನ್ನು ತಾನು ಪರಿಶೀಲಿಸುತ್ತಿರುವುದಾಗಿ ಹಮಾಸ್ ಹೇಳಿದೆ.
ಯುದ್ಧಗ್ರಸ್ತ ಪ್ರದೇಶದಲ್ಲಿ ಆಹಾರ ನೆರವು ವಿತರಣೆಗೆ ಅಮೆರಿಕ ಬೆಂಬಲಿತ ಯೋಜನೆಯನ್ನು ವಿಸ್ತರಿಸಲಾಗಿದೆ. ಇದೇ ವೇಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಮಂಡಿಸಿರುವ ಒಪ್ಪಂದವನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಝಾದಲ್ಲಿಯ ಒತ್ತೆಯಾಳುಗಳ ಕುಟುಂಬಗಳಿಗೆ ತಿಳಿಸಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ನೆತನ್ಯಾಹು ಅವರ ಕಚೇರಿಯು ವರದಿಗಳನ್ನು ದೃಢಪಡಿಸಿಲ್ಲ,ಆದರೆ ವಾಷಿಂಗ್ಟನ್ನಲ್ಲಿ ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೀವಿಟ್ ಅವರು,ಇಸ್ರೇಲ್ ಪ್ರಸ್ತಾವಕ್ಕೆ ಸಹಿ ಹಾಕಿದೆ ಎಂದು ಸುದ್ದಿಗಾರರರಿಗೆ ತಿಳಿಸಿದರು. ಪ್ರಸ್ತಾವದಲ್ಲಿಯ ವಿಷಯಗಳನ್ನು ಅವರು ವಿವರಿಸಲಿಲ್ಲ.
ಆದರೆ ಪ್ರಸ್ತಾವಿತ ಒಪ್ಪಂದದ ಆರಂಭಿಕ ಹಂತವು 60 ದಿನಗಳ ಕದನ ವಿರಾಮ ಮತ್ತು ಗಾಝಾ ಪ್ರದೇಶಕ್ಕೆ ಮಾನವೀಯ ನೆರವು ಒಳಗೊಂಡಿರಲಿದೆ ಎಂದು ಬಲ್ಲ ಮೂಲವೊಂದು ತಿಳಿಸಿದೆ.
ಹಮಾಸ್ ಇನ್ನೂ ಪ್ರಸ್ತಾವದ ಬಗ್ಗೆ ಚರ್ಚಿಸುತ್ತಿದೆ ಎಂದು ಗುಂಪಿನ ಹಿರಿಯ ಅಧಿಕಾರಿ ಸಮಿ ಅಬು ಝುಹ್ರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆದರೆ ಪ್ರಸ್ತಾವದಲ್ಲಿಯ ಷರತ್ತುಗಳು ಇಸ್ರೇಲ್ನ ನಿಲುವನ್ನು ಪ್ರತಿಧ್ವನಿಸಿವೆ ಮತ್ತು ಹಮಾಸ್ ಒತ್ತಾಯಿಸಿರುವಂತೆ ಯುದ್ಧವನ್ನು ಅಂತ್ಯಗೊಳಿಸುವ,ಇಸ್ರೇಲಿ ಪಡೆಗಳನ್ನು ಹಿಂದೆಗೆದುಕೊಳ್ಳುವ ಅಥವಾ ನೆರವಿಗೆ ಪ್ರವೇಶದ ಬದ್ಧತೆಗಳನ್ನು ಅದು ಒಳಗೊಂಡಿಲ್ಲ ಎಂದು ಝುಹ್ರಿ ಹೇಳಿದರು.
ಹಮಾಸ್ ಮತ್ತು ಇಸ್ರೇಲ್ ನಡುವಿನ ಭಿನ್ನಾಭಿಪ್ರಾಯಗಳು ಮಾರ್ಚ್ನಲ್ಲಿ ಕೇವಲ ಎರಡು ತಿಂಗಳ ಬಳಿಕ ಮುರಿದು ಬಿದ್ದ ಕದನ ವಿರಾಮವನ್ನು ಮರುಸ್ಥಾಪಿಸುವ ಹಿಂದಿನ ಯೋಜನೆಗಳಿಗೆ ಅಡ್ಡಿಯಾಗಿದ್ದವು.
ಯುದ್ಧವನ್ನು ಅಂತ್ಯಗೊಳಿಸಲು ತಾನು ಒಪ್ಪಿಕೊಳ್ಳುವ ಮುನ್ನ ಹಮಾಸ್ನ್ನು ಸಂಪೂರ್ಣವಾಗಿ ನಿಶ್ಶಸ್ತ್ರಗೊಳಿಸಬೇಕು,ಮಿಲಿಟರಿ ಮತ್ತು ಆಡಳಿತ ಪಡೆಯಾಗಿ ಅದನ್ನು ಕಿತ್ತು ಹಾಕಬೇಕು ಹಾಗೂ ಗಾಝಾದಲ್ಲಿ ಈಗಲೂ ಒತ್ತೆಯಾಳುಗಳಾಗಿರುವ ಎಲ್ಲ 58 ಜನರನ್ನು ಬಿಡುಗಡೆಗೊಳಿಸಬೇಕು ಎಂದು ಇಸ್ರೇಲ್ ಒತ್ತಾಯಿಸಿದೆ.
ತನ್ನ ಶಸ್ತ್ರಾಸ್ತ್ರಗಳನ್ನು ತೊರೆಯಬೇಕು ಎಂಬ ಬೇಡಿಕೆಯನ್ನು ತಿರಸ್ಕರಿಸಿರುವ ಹಮಾಸ್, ಇಸ್ರೇಲ್ ಗಾಝಾದಿಂದ ತನ್ನ ಪಡೆಗಳನ್ನು ಹಿಂದೆಗೆದುಕೊಳ್ಳಬೇಕು ಮತ್ತು ಯುದ್ಧವನ್ನು ಅಂತ್ಯಗೊಳಿಸಲು ಬದ್ಧವಾಗಬೇಕು ಎಂದು ಪಟ್ಟು ಹಿಡಿದಿದೆ.







