ಗಾಝಾ ವಿಷಕಾರಿ ಪಾಳುಭೂಮಿಯಾಗಿ ಮಾರ್ಪಟ್ಟಿದೆ; ಇಸ್ರೇಲ್ ಗೆ ಮಿಲಿಟರಿ ನೆರವು ನಿಲ್ಲಿಸಿ: ಅಮೆರಿಕಕ್ಕೆ ಸೆನೆಟರ್ ಬರ್ನಿ ಸ್ಯಾಂಡರ್ಸ್ ಆಗ್ರಹ

Photo credit : aljazeera
ವಾಷಿಂಗ್ಟನ್: ಇಸ್ರೇಲ್ ನ ಮೂರು ವರ್ಷಗಳ ಮಿಲಿಟರಿ ಕಾರ್ಯಾಚರಣೆಯಿಂದ ಗಾಝಾ ಪ್ರದೇಶವು 'ವಿಷಕಾರಿ ಪಾಳುಭೂಮಿ'ಯಾಗಿ ಮಾರ್ಪಟ್ಟಿದೆ ಎಂಬ ಆತಂಕವನ್ನು ಆಕ್ಸ್ಫ್ಯಾಮ್ ನ ಹೊಸ ವರದಿ ದೃಢಪಡಿಸಿದೆ ಎಂದು ಅಮೆರಿಕದ ಸೆನೆಟರ್ ಬರ್ನಿ ಸ್ಯಾಂಡರ್ಸ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಗೆ ನೀಡುತ್ತಿರುವ ಮಿಲಿಟರಿ ನೆರವನ್ನು ಸ್ಥಗಿತಗೊಳಿಸುವಂತೆ ಅವರು ಅಮೆರಿಕ ಸರಕಾರವನ್ನು ಆಗ್ರಹಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಸಾಮಾಜಿಕ ಜಾಲತಾಣ X ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಸ್ಯಾಂಡರ್ಸ್, ಗಾಝಾದಲ್ಲಿ ನೈರ್ಮಲ್ಯ ವ್ಯವಸ್ಥೆಗಳ ಕೊರತೆ ಹಾಗೂ 61 ಮಿಲಿಯನ್ ಟನ್ ಗಳಿಗೂ ಅಧಿಕ ಕಟ್ಟಡಗಳ ಅವಶೇಷಗಳ ಸಂಗ್ರಹದಿಂದಾಗಿ ಪರಿಸರ ತೀವ್ರವಾಗಿ ಕಲುಷಿತಗೊಂಡಿದೆ ಎಂದು ಹೇಳಿದ್ದಾರೆ.
ಗಾಝಾದ ಪರಿಸರ ಮತ್ತು ಮಾನವೀಯ ಪರಿಸ್ಥಿತಿಗಳು 'ಸ್ವೀಕಾರಾರ್ಹವಲ್ಲ' ಎಂದು ಹೇಳಿರುವ ಅವರು, ಇಸ್ರೇಲ್ ಗೆ ಮಿಲಿಟರಿ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಬೇಕು. ಬದಲಾಗಿ ಗಾಝಾದ ಜನರ ಬದುಕನ್ನು ಪುನಃ ಕಟ್ಟಿಕೊಳ್ಳಲು ಮತ್ತು ಪ್ರದೇಶದ ಪುನರ್ನಿರ್ಮಾಣಕ್ಕೆ ನೆರವಾಗುವ ಪ್ರಯತ್ನಗಳನ್ನು ಬೆಂಬಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘರ್ಷ ಮತ್ತು ಪರಿಸರ ವೀಕ್ಷಣಾಲಯದ ಸಹಯೋಗದೊಂದಿಗೆ ಪ್ರಕಟಿಸಲಾದ ಆಕ್ಸ್ಫ್ಯಾಮ್ ವರದಿಯು, ಗಾಝಾದ ಶೇ. 99ಕ್ಕೂ ಅಧಿಕ ಪ್ರದೇಶಗಳಲ್ಲಿ ವಿಷಕಾರಿ ಮಾಲಿನ್ಯ ಪತ್ತೆಯಾಗಿದೆ. ಈ ಮಾಲಿನ್ಯವು ಗಾಳಿ, ಮಣ್ಣು, ನೀರು ಮತ್ತು ಆಹಾರದ ಮೇಲೂ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿದೆ.
ನೈರ್ಮಲ್ಯ ವ್ಯವಸ್ಥೆಗಳ ನಾಶ ಮತ್ತು 61 ಮಿಲಿಯನ್ ಟನ್ಗಳಿಗೂ ಅಧಿಕ ಅಪಾಯಕಾರಿ ಶಿಲಾಖಂಡರಾಶಿಗಳ ಸಂಗ್ರಹವು ಮಾನವ ಬದುಕುಳಿಯುವಿಕೆಗೆ ಬೆದರಿಕೆಯೊಡ್ಡಿದೆ. ಇಂತಹ ಪರಿಸ್ಥಿತಿಗಳು ಪರಿಸರ ಸಂಬಂಧಿತ ಯುದ್ಧಾಪರಾಧಗಳಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.






