ಅಮೆರಿಕದ ನೌಕೆಗಳಿಂದ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಗೆ ಅಕ್ರಮ ಪ್ರವೇಶ: ಚೀನಾ

ಸಾಂದರ್ಭಿಕ ಚಿತ್ರ (Photo : Reuters)
ಬೀಜಿಂಗ್, ಆ.13: ಅಮೆರಿಕದ ನೌಕಾಸೇನೆಯ ನೌಕೆಯು ದಕ್ಷಿಣ ಚೀನಾ ಸಮುದ್ರದ ಹ್ಯುಂಗ್ಯಾನ್ ಡವೊ ಪ್ರದೇಶದ ಬಳಿ ಸಮುದ್ರ ವ್ಯಾಪ್ತಿಯನ್ನು ಅನುಮತಿ ಪಡೆಯದೆ ಅಕ್ರಮವಾಗಿ ಪ್ರವೇಶಿಸಿರುವುದಾಗಿ ಚೀನಾ ಬುಧವಾರ ಆರೋಪಿಸಿದೆ.
ಯುಎಸ್ಎಸ್ ಹಿಗ್ಗಿನ್ಸ್ ಸಮರನೌಕೆಯು ಚೀನಾದ ಪ್ರಾದೇಶಿಕ ಜಲವ್ಯಾಪ್ತಿಯೊಳಗೆ ಅಕ್ರಮವಾಗಿ ನುಗ್ಗಿದ್ದು ಅದನ್ನು ಚೀನಾದ ಪಡೆಗಳು ಹೊರಗೆ ಹಾಕಿವೆ ಎಂದು ಚೀನಾ ದಕ್ಷಿಣ ವಲಯ ನೌಕಾದಳದ ವಕ್ತಾರ ಹೆ ಟಿಯೆಚೆಂಗ್ ಹೇಳಿದ್ದಾರೆ. ಅಮೆರಿಕದ ಮಿಲಿಟರಿ ಕ್ರಮವು ಚೀನಾದ ಸಾರ್ವಭೌಮತ್ವ, ಭದ್ರತೆಯನ್ನು ತೀವ್ರವಾಗಿ ಉಲ್ಲಂಘಿಸಿದ್ದು ದಕ್ಷಿಣ ಚೀನಾ ಸಮುದ್ರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸಿದೆ. ಜೊತೆಗೆ ಅಂತರಾಷ್ಟ್ರೀಯ ಕಾನೂನು ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಮೂಲ ನಿಯಮಗಳನ್ನು ಉಲ್ಲಂಘಿಸಿದೆ. ಚೀನಾ ನೌಕಾಪಡೆಯ ಹಡಗುಗಳು ಸದಾ ಗರಿಷ್ಠ ಜಾಗೃತೆಯ ಸ್ಥಿತಿಯಲ್ಲಿದ್ದು ರಾಷ್ಟ್ರೀಯ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ, ಶಾಂತಿ, ಸ್ಥಿರತೆಯನ್ನು ದೃಢವಾಗಿ ಸಮರ್ಥಿಸಿಕೊಳ್ಳಲಿವೆ ಎಂದವರು ಹೇಳಿರುವುದಾಗಿ ವರದಿಯಾಗಿದೆ.





