ಸತತ 7ನೇ ರಾತ್ರಿ ಇರಾನ್ ಮೇಲೆ ಅಮೆರಿಕ ದಾಳಿ : ಮೂವರು ಮೃತ್ಯು; ಮಧ್ಯಪ್ರಾಚ್ಯದಾದ್ಯಂತ ವಿಸ್ತರಿಸಿದ ಸಂಘರ್ಷ

Photo Credit : AP, PTI
ವಾಶಿಂಗ್ಟನ್, ಜು.18: ಅಮೆರಿಕ ಮತ್ತು ಇರಾನ್ ಸತತ ಏಳನೇ ರಾತ್ರಿಯೂ ಪರಸ್ಪರ ಹೊಸ ದಾಳಿಗಳನ್ನು ನಡೆಸಿದ್ದು, ದಕ್ಷಿಣ ಇರಾನ್ನಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಇರಾನ್ ಹೇಳಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಪಡೆಗಳು ಕುವೈತ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಮಧ್ಯಪ್ರಾಚ್ಯದ ಸಂಘರ್ಷ ಮತ್ತಷ್ಟು ವಿಸ್ತರಿಸಿದೆ.
ದಕ್ಷಿಣದ ಹಾರ್ಮುಜ್ಗನ್ ಪ್ರಾಂತದಲ್ಲಿರುವ ವಿದ್ಯುತ್ ಮತ್ತು ಉಪ್ಪುನೀರು ಶುದ್ಧೀಕರಣ ಘಟಕದ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು ಮೂವರು ಮೃತಪಟ್ಟಿದ್ದಾರೆ ಮತ್ತು ಇತರ ಎಂಟು ಜನರು ಗಾಯಗೊಂಡಿದ್ದಾರೆ . ಹಾರ್ಮುಝ್ ಜಲಸಂಧಿಯ ಇರಾನ್ ಕರಾವಳಿಯಲ್ಲಿರುವ ಬೊಂಜಿ ಎಂಬ ಗ್ರಾಮದ ಮೇಲೆ ದಾಳಿ ನಡೆದಿವೆ ಎಂದು ಇರಾನ್ನ ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ತಡರಾತ್ರಿ ನಡೆದ ದಾಳಿಗಳು ಎರಡು ಸುರಂಗಗಳು ಮತ್ತು ಒಂದು ಸೇತುವೆಯನ್ನು ಹಾನಿಗೊಳಿಸಿದ್ದು, ಹಾರ್ಮುಝ್ ಜಲಸಂಧಿಯ ಅತ್ಯಂತ ಕಿರಿದಾದ ಭಾಗದ ಬಳಿ ಇರುವ ಬಂದರ್ ಅಬ್ಬಾಸ್ ನಗರದ ಕಡೆಗೆ ಹೋಗುವ ಪ್ರಮುಖ ಹೆದ್ದಾರಿಗಳಲ್ಲಿ ಒಂದನ್ನು ಸ್ಥಗಿತಗೊಳಿಸಿವೆ. ಜಲಸಂಧಿಯ ಒಳಗಿರುವ ಆಯಕಟ್ಟಿನ ಕೇಶ್ಮ್ ದ್ವೀಪದ ಮೇಲೆಯೂ ದಾಳಿ ನಡೆದಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಎರಡು ಸೇತುವೆಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ ಎಂದು ಇರಾನ್ ಆರೋಪಿಸಿದೆ.
ವೈಮಾನಿಕ ದಾಳಿಗಳು ಇರಾನ್ನ ಕಣ್ಗಾವಲು ನೆಲೆಗಳು, ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳು, ಭೂಗತ ಶಸ್ತ್ರಾಸ್ತ್ರ ಸಂಗ್ರಹಣಾಗಾರಗಳು ಮತ್ತು ಕಡಲ ಸಾಮಥ್ರ್ಯಗಳ ಮೇಲೆ ಅಪ್ಪಳಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಶನಿವಾರ ತಿಳಿಸಿದೆ.






