ಗಾಝಾದಲ್ಲಿ ಯುಎನ್ಆರ್ಡಬ್ಲ್ಯೂಎ ಕಾರ್ಯಾಚರಣೆ ನಿಷೇಧಿಸಿದ ಇಸ್ರೇಲ್ ಕ್ರಮಕ್ಕೆ ಅಮೆರಿಕ ಬೆಂಬಲ
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡನೆ

UNRWA | PC : aljazeera.com
ಹೇಗ್: ವಿಶ್ವಸಂಸ್ಥೆಯ ಫೆಲೆಸ್ತೀನಿಯನ್ ನಿರಾಶ್ರಿತರ ಏಜೆನ್ಸಿ ಯುಎನ್ಆರ್ಡಬ್ಲ್ಯೂಎ ಗಾಝಾದಲ್ಲಿ ಕಾರ್ಯಾಚರಣೆ ನಡೆಸಲು ಅವಕಾಶ ಮಾಡಿಕೊಡುವಂತೆ ಇಸ್ರೇಲ್ ಅನ್ನು ಬಲವಂತಪಡಿಸಲಾಗದು ಎಂದು ಅಮೆರಿಕ ಬುಧವಾರ ಜಾಗತಿಕ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದೆ.
ಯುಎನ್ಆರ್ಡಬ್ಲ್ಯೂಎ ಗಾಝಾದಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸುವ ಕಾನೂನನ್ನು ಇಸ್ರೇಲ್ ಕಳೆದ ವರ್ಷ ಅನುಮೋದಿಸಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಸದಸ್ಯರನ್ನು ಯುಎನ್ಆರ್ಡಬ್ಲ್ಯೂಎ ನೇಮಿಸಿಕೊಂಡಿದೆ ಎಂದು ಇಸ್ರೇಲ್ ಆರೋಪಿಸಿತ್ತು. ಇಸ್ರೇಲ್ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ 9 ಯುಎನ್ಆರ್ಡಬ್ಲ್ಯೂಎ ಸಿಬ್ಬಂದಿಗಳನ್ನು ವಜಾಗೊಳಿಸಿರುವುದಾಗಿ ವಿಶ್ವಸಂಸ್ಥೆ ಕಳೆದ ಆಗಸ್ಟ್ ನಲ್ಲಿ ಹೇಳಿಕೆ ನೀಡಿತ್ತು. ಅಕ್ಟೋಬರ್ ನಲ್ಲಿ ಗಾಝಾದಲ್ಲಿ ಹತ್ಯೆಯಾದ ಹಮಾಸ್ ಕಮಾಂಡರ್ ತನ್ನ ಸಿಬ್ಬಂದಿಯೆಂದು ಯುಎನ್ಆರ್ಡಬ್ಲ್ಯೂಎ ದೃಢಪಡಿಸಿರುವುದಾಗಿ ಇಸ್ರೇಲ್ ಹೇಳಿದೆ.
ರಾಷ್ಟ್ರಗಳು ಹಾಗೂ ವಿಶ್ವಸಂಸ್ಥೆ ಸೇರಿದಂತೆ ಅಂತರಾಷ್ಟ್ರೀಯ ನೆರವು ಸಂಸ್ಥೆಗಳು ಒದಗಿಸಿರುವ ನೆರವನ್ನು ಫೆಲೆಸ್ತೀನೀಯಾದವರಿಗೆ ಸರಾಗವಾಗಿ ತಲುಪಿಸುವ ಇಸ್ರೇಲ್ ನ ಕಟ್ಟುಪಾಡುಗಳ ಬಗ್ಗೆ ಸಲಹಾ ಅಭಿಪ್ರಾಯವನ್ನು ನೀಡುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವನ್ನು ಕೇಳಿದೆ. ಈ ನಿಟ್ಟಿನಲ್ಲಿ ಜಾಗತಿಕ ನ್ಯಾಯಾಲಯದ ನ್ಯಾಯಪೀಠ ಒಂದು ವಾರದ ವಿಚಾರಣಾ ಕಲಾಪವನ್ನು ನಡೆಸುತ್ತಿದೆ.
ಅಂತರಾಷ್ಟ್ರೀಯ ನ್ಯಾಯಾಲಯದ ಮೂರನೇ ದಿನದ ವಿಚಾರಣಾ ಕಲಾಪದಲ್ಲಿ ವಾದ ಮಂಡಿಸಿದ ಅಮೆರಿಕ `ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದ ಜನಸಂಖ್ಯೆಗೆ ಯಾವ ಸಂಸ್ಥೆಗಳು ಮೂಲಭೂತ ಅಗತ್ಯಗಳನ್ನು ಒದಗಿಸಬಹುದೆಂದು ನಿರ್ಧರಿಸುವ ಹಕ್ಕನ್ನು ಇಸ್ರೇಲ್ ಹೊಂದಿದೆ' ಎಂದು ಪ್ರತಿಪಾದಿಸಿದೆ. ಆಕ್ರಮಿತ ಪ್ರದೇಶದಲ್ಲಿ ಆಡಳಿತ ನಡೆಸುವ ಕಾನೂನುಬದ್ಧ ಹಕ್ಕನ್ನು ಹೊಂದಿರುವ ದೇಶವು ಯಾವ ಪರಿಹಾರ ಯೋಜನೆಗೆ ಅನುಮತಿ ನೀಡಬೇಕೆಂಬ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ. ಪರಿಹಾರ ನೀಡುವ ಸಂಸ್ಥೆಯು ನಿಷ್ಪಕ್ಷಪಾತ ಮಾನವೀಯ ಸಂಘಟನೆಯಾಗಿದ್ದರೂ ಸಹ, ನಿರ್ದಿಷ್ಟ ಸಂಸ್ಥೆಯ ಕಾರ್ಯಾಚರಣೆಗೆ ಅವಕಾಶ ನೀಡಬೇಕೆಂದು ಬಲವಂತಪಡಿಸುವಂತಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾನೂನು ಸಲಹೆಗಾರ ಜೊಷುವಾ ಸಿಮನ್ಸ್ ಹೇಳಿದ್ದಾರೆ.
ಯುಎನ್ಆರ್ಡಬ್ಲ್ಯೂಎದ ನಿಷ್ಪಕ್ಷಪಾತದ ಬಗ್ಗೆ ಇಸ್ರೇಲ್ ಗಂಭೀರವಾದ ಕಳವಳವನ್ನು ಹೊಂದಿದೆ ಎಂದು ಸಿಮನ್ಸ್ ಒತ್ತಿಹೇಳಿದ್ದಾರೆ.
ಸೋಮವಾರ ಪ್ರಾರಂಭಗೊಂಡ ಅಂತರಾಷ್ಟ್ರೀಯ ನ್ಯಾಯಾಲಯದ ಕಲಾಪದ ಆರಂಭದ ದಿನ ವಾದ ಮಂಡಿಸಿದ ವಿಶ್ವಸಂಸ್ಥೆ ಮತ್ತು ಫೆಲೆಸ್ತೀನಿಯನ್ ಪ್ರತಿನಿಧಿಗಳು `ಗಾಝಾಕ್ಕೆ ನೆರವು ಪೂರೈಕೆಯನ್ನು ನಿರಾಕರಿಸುವ ಮೂಲಕ ಇಸ್ರೇಲ್ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ' ಎಂದು ಆರೋಪಿಸಿದ್ದರು. ಮಾರ್ಚ್ 2ರಿಂದ ಇಸ್ರೇಲ್ ಗಾಝಾ ಪಟ್ಟಿಯ 2.3 ದಶಲಕ್ಷ ನಿವಾಸಿಗಳಿಗೆ ಎಲ್ಲಾ ಸರಬರಾಜುಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಿದೆ. ಈ ಮಧ್ಯೆ, ಜಾಗತಿಕ ನ್ಯಾಯಾಲಯದ ವಿಚಾರಣೆಯನ್ನು `ಸರ್ಕಸ್' ಎಂದು ಬಣ್ಣಿಸಿರುವ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಇಸ್ರೇಲ್ ತನ್ನ ನಿಲವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದೆ ಎಂದಿದ್ದಾರೆ.







