ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ಇರಾನ್ಗೆ ಚೀನಾದ ಉಪಗ್ರಹ ಬೆಂಬಲ: ಅಮೆರಿಕ ಶಂಕೆ

Photo Credit : X
ವಾಶಿಂಗ್ಟನ್: ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ಇರಾನ್ಗೆ ಚೀನಾದ ಉಪಗ್ರಹ ಬೆಂಬಲ ಸಿಕ್ಕಿದೆಯೇ ಎಂಬುದರ ಕುರಿತು ಅಮೆರಿಕ ತನಿಖೆ ನಡೆಸುತ್ತಿದೆ. ಇರಾನ್ ಪಡೆದುಕೊಂಡಿದ್ದ ಉನ್ನತ ಮಟ್ಟದ ಜೂಮ್ ಉಪಗ್ರಹ ಚಿತ್ರಗಳು ಜೋರ್ಡಾನ್ನಲ್ಲಿ ಮೂವರು ಅಮೆರಿಕನ್ ಸೈನಿಕರನ್ನು ಬಲಿ ಪಡೆದ ಕ್ಷಿಪಣಿ ದಾಳಿಗೆ ಸಂಬಂಧಿಸಿವೆ ಎಂದು `ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.
ಜುಲೈ 17ರ ದಾಳಿಗೂ ಮುನ್ನ ಇರಾನ್, ಮುವಾಫಕ್ ಅಲ್ ಸಾಲ್ಟಿ ವಾಯುನೆಲೆಯ ಉಪಗ್ರಹ ಚಿತ್ರಗಳನ್ನು ಪಡೆದುಕೊಂಡಿತ್ತು ಮತ್ತು ದಾಳಿಯ ನಂತರ ಹಾನಿಯನ್ನು ಪರಿಶೀಲಿಸಲು ಚಿತ್ರಗಳನ್ನು ಪಡೆದಿತ್ತು ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ಅಮೆರಿಕ ಪಡೆಗಳು ನಿದ್ರಿಸುತ್ತಿದ್ದ ವಸತಿ ಪ್ರದೇಶಕ್ಕೆ ಅಪ್ಪಳಿಸಿದ ಈ ದಾಳಿಯಲ್ಲಿ ಮೂವರು ಅಮೆರಿಕನ್ ಸಿಬ್ಬಂದಿ ಮೃತಪಟ್ಟಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು. ದಾಳಿಯ ಕೆಲವು ಗಂಟೆಗಳಲ್ಲೇ ವಾಯುನೆಲೆಯ ವಿಡಿಯೋ ಹೊರಬಿದ್ದಿತ್ತು. ಮುವಾಫಕ್ ವಾಯುನೆಲೆಯು ಜೋರ್ಡಾನ್ ರಾಜಧಾನಿ ಅಮ್ಮನ್ನಿಂದ ಪೂರ್ವಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ. ಜುಲೈನಲ್ಲಿ 24 ಗಂಟೆಗಳ ಅವಧಿಯಲ್ಲಿ ಇರಾನ್ ಈ ವಾಯುನೆಲೆಯ ಮೇಲೆ ಮೂರು ಬಾರಿ ದಾಳಿ ಮಾಡಿತ್ತು.
ತಮ್ಮ ತನಿಖೆಯು ಚೀನಾ ಮೂಲದ ಉಪಗ್ರಹ ಚಿತ್ರಗಳನ್ನು ಈ ದಾಳಿಗೆ ಲಿಂಕ್ ಮಾಡಿದೆ. ಯುದ್ಧದ ಸಮಯದಲ್ಲಿ ಇರಾನ್ಗೆ ಚೀನಾದ ಬೆಂಬಲವು ಅಮೆರಿಕದ ಪಡೆಗಳಿಗೆ ಮಾರಕ ಪರಿಣಾಮಗಳನ್ನು ಬೀರಿದೆ ಎಂಬುದಕ್ಕೆ ಇದುವರೆಗಿನ ಅತ್ಯಂತ ಸ್ಪಷ್ಟವಾದ ಪುರಾವೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯು ಕೇವಲ ಮಿಲಿಟರಿ ನೆಲೆಗಳ ಉಪಗ್ರಹ ಚಿತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಸೇರಿದಂತೆ ಅಮೆರಿಕದ ನೌಕಾಪಡೆಯ ಆಸ್ತಿಗಳನ್ನು ಪತ್ತೆಹಚ್ಚಲು ಇರಾನ್ಗೆ ಚೀನಾದ ನೆರವು ಸಿಗುತ್ತಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಚೀನಾ ಈ ಆರೋಪಗಳನ್ನು ತಿರಸ್ಕರಿಸಿದ್ದು, ಆಧಾರ ಅಥವಾ ಸಾಕ್ಷ್ಯಗಳನ್ನು ಒದಗಿಸುವಂತೆ ಆಗ್ರಹಿಸಿದೆ.






