ರಕ್ಷಣಾ, ಗುಪ್ತಚರ ಬಜೆಟ್ ಅನ್ನು ನಾಗರಿಕರ ಮೇಲ್ವಿಚಾರಣೆಯಲ್ಲಿ ಇರಿಸಲು ಪಾಕಿಸ್ತಾನಕ್ಕೆ ಅಮೆರಿಕಾ ಸೂಚನೆ

Photo; PTI
ವಾಷಿಂಗ್ಟನ್, ಸೆ.21: ತನ್ನ ರಕ್ಷಣಾ ಮತ್ತು ಗುಪ್ತಚರ ಬಜೆಟ್ ಅನ್ನು ನಾಗರಿಕರ ಅಥವಾ ಸಂಸದೀಯ ಮೇಲ್ವಿಚಾರಣೆಯಲ್ಲಿ ಇಡಲು ಪಾಕಿಸ್ತಾನಕ್ಕೆ ಅಮೆರಿಕದ ವಿದೇಶಾಂಗ ಇಲಾಖೆ ಸೂಚಿಸಿದ್ದು ಹಣಕಾಸಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದೆ ಎಂದು `ಡಾನ್' ಸುದ್ದಿಸಂಸ್ಥೆ ವರದಿ ಮಾಡಿದೆ.
ಶುಕ್ರವಾರ ಬಿಡುಗಡೆಗೊಳಿಸಿರುವ ಅಮೆರಿಕ ವಿದೇಶಾಂಗ ಇಲಾಖೆಯ 2025 ಹಣಕಾಸಿನ ಪಾರದರ್ಶಕತೆ ವರದಿಯಲ್ಲಿ ಈ ಸಲಹೆಯನ್ನು ಸೇರಿಸಲಾಗಿದೆ. ಪಾಕಿಸ್ತಾನದ ಮಿಲಿಟರಿ ಮತ್ತು ಗುಪ್ತಚರ ಬಜೆಟ್ಗಳು ಸಾಕಷ್ಟು ಸಂಸದೀಯ ಅಥವಾ ನಾಗರಿಕ ಸಾರ್ವಜನಿಕ ಮೇಲ್ವಿಚಾರಣೆಗೆ ಒಳಪಡಲಿಲ್ಲ.
ಆದ್ದರಿಂದ ಕಾರ್ಯನಿರ್ವಾಹಕ ಬಜೆಟ್ ಪ್ರಸ್ತಾಪವನ್ನು ಸಮಂಜಸವಾದ ಅವಧಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕಿದೆ . ಪಾಕಿಸ್ತಾನವು ತನ್ನ ಕಾರ್ಯನಿರ್ವಾಹಕ ಬಜೆಟ್ ಪ್ರಸ್ತಾಪವನ್ನು ಸಮಂಜಸ ಅವಧಿಯೊಳಗೆ ಪ್ರಕಟಿಸಿಲ್ಲ. ಪ್ರಮುಖ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಸಾಲ ಸೇರಿದಂತೆ ತನ್ನ ಸಾಲದ ಕಟ್ಟುಪಾಡುಗಳ ಬಗ್ಗೆ ಸರಕಾರ ಕೇವಲ ಸೀಮಿತ ಮಾಹಿತಿಯನ್ನು ಮಾತ್ರ ಸಾರ್ವಜನಿಕರ ಲಭ್ಯತೆಗೆ ಒದಗಿಸಿದೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ ನಕಲಿ ಸಂಸ್ಥೆಗಳ ಮೂಲಕ ಕಾರ್ಯಾಚರಿಸುವ ಉಗ್ರಗಾಮಿ ಗುಂಪುಗಳು ಬಜೆಟ್ ಅನುದಾನದ ಲಾಭ ಪಡೆಯುತ್ತಿವೆ ಎಂದು ಅಮೆರಿಕದ ಹಲವು ಅಂತರಾಷ್ಟ್ರೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ಸರಕಾರದ ನೆರವು ಪಡೆಯುತ್ತಿವೆ ಎಂದು ಭಾರತವೂ ನಿರಂತರ ಪ್ರತಿಪಾದಿಸುತ್ತಿದೆ.







