ಮಧುಮೇಹ, ಹೃದ್ರೋಗ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೀಸಾ ನಿರಾಕರಿಸಲು ಅಮೆರಿಕ ನಿರ್ಧಾರ !

PC: istockphoto
ವಾಷಿಂಗ್ಟನ್: ಮಧುಮೇಹ ಹಾಗೂ ಹೃದ್ರೋಗದಂಥ ಗಂಭೀರ ಕಾಯಿಲೆಗಳನ್ನು ಹೊಂದಿದ ವಿದೇಶಿಯರು ಅಮೆರಿಕಕ್ಕೆ ವಲಸೆ ಹೋಗಲು ವೀಸಾ ಹಾಗೂ ಗ್ರೀನ್ಕಾರ್ಡ್ ಪಡೆಯಲು ಬಯಸಿದಲ್ಲಿ, ಅಂಥ ಮನವಿಗಳನ್ನು ತಿರಸ್ಕರಿಸಲು ಅಮೆರಿಕ ನಿರ್ಧರಿಸಿದೆ. ಟ್ರಂಪ್ ಆಡಳಿತ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ಅನ್ವಯ ಹಾಲಿ ಗಂಭೀರ ಕಾಯಿಲೆಗಳಿರುವವರಿಗೆ ವೀಸಾ ನೀಡದಿರಲು ನಿರ್ಧರಿಸಲಾಗಿದೆ.
ಸಂಭಾವ್ಯ ಸಾರ್ವಜನಿಕ ವೆಚ್ಚಕ್ಕೆ ಕಾರಣವಾಗುವ ಮಾನದಂಡವನ್ನು ವಿಸ್ತರಿಸಲಾಗಿದ್ದು, ಈ ಸಂಬಂಧ ರಕ್ಷಣಾ ಇಲಾಖೆ ವಿಶ್ವಾದ್ಯಂತ ಇರುವ ಎಲ್ಲ ಅಮೆರಿಕನ್ ರಾಯಭಾರ ಕಚೇರಿ ಮತ್ತು ದೂತಾವಾಸಗಳಿಗೆ ಈ ನಿರ್ದೇಶನ ನೀಡಿದೆ.
ಇಂಥ ಗಂಭೀರ ಕಾಯಿಲೆಗಳಿರುವವರ ವೈದ್ಯಕೀಯ ಆರೈಕೆಗೆ ಬೊಕ್ಕಸಕ್ಕೆ ನೂರಾರು, ಸಾವಿರಾರು ಡಾಲರ್ ವೆಚ್ಚ ತಗುಲುವ ಸಾಧ್ಯತೆ ಇದೆ ಎಂದು ಎಲ್ಲ ರಾಯಭಾರ ಕಚೇರಿಗಳಿಗೆ ಕಳುಹಿಸಿರುವ ನಿರ್ದೇಶನದಲ್ಲಿ ಹೇಳಲಾಗಿದೆ. ಪಟ್ಟಿ ಮಾಡಲಾದ ಗಂಭೀರ ಆರೋಗ್ಯ ಸಮಸ್ಯೆಗಳ ಪೈಕಿ ಹೃದ್ರೋಗ, ಉಸಿರಾಟದ ತೊಂದರೆ, ಕ್ಯಾನ್ಸರ್, ಮಧುಮೇಹ, ಜೀರ್ಣಸಂಬಂಧಿ ರೋಗಗಳು, ನರರೋಗಗಳು ಮತ್ತು ಮಾನಸಿಕ ಆರೋಗ್ಯ ಸೇರಿದ್ದು, ಈ ಪಟ್ಟಿ ಇಷ್ಟಕ್ಕೇ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದರ ಜತೆಗೆ ದುಬಾರಿ ಆರೋಗ್ಯಸಂಕೀರ್ಣತೆಗಳಾದ ಆಸ್ತಮಾ, ನಿದ್ರಾಸಮಸ್ಯೆ ಮತ್ತು ಅಧಿಕ ರಕ್ತದ ಒತ್ತಡಕ್ಕೆ ಕಾರಣವಾಗಬಹುದಾದ ಬೊಜ್ಜಿನಂಥ ಸಮಸ್ಯೆಗಳನ್ನೂ ಪರಿಗಣಿಸುವಂತೆ ಅಧಿಕಾರಿಗಳಿಗೆ ಸಲಹೆ ಮಾಡಲಾಗಿದೆ. ಈ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಭವಿಷ್ಯದಲ್ಲಿ ಅಮೆರಿಕಕ್ಕೆ ವಿತ್ತೀಯವಾಗಿ ಹೊರೆಯಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಗಡಿ ನುಸುಳುವಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಟ್ರಂಪ್ ಆಡಳಿತ ಗುರುವಾರ ಈ ನೀತಿ ಬದಲಾವಣೆಯನ್ನು ಘೋಷಿಸಿದ್ದು, ಅಮೆರಿಕಕ್ಕೆ ಪ್ರವೇಶ ಬಯಸುವವರ ಆರೋಗ್ಯ ಸ್ಥಿತಿಯನ್ನು ಅರ್ಹತಾ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ.







