ಗಾಝಾ ಕದನ ವಿರಾಮದ ವಿಷಯದಲ್ಲಿ ವಿಶ್ವಸಂಸ್ಥೆ ನಿಷ್ಕ್ರಿಯ: ಗುಟೆರಸ್

Photo : PTI
ದುಬೈ: ಗಾಝಾದಲ್ಲಿ ಕದನ ವಿರಾಮಕ್ಕೆ ಆಗ್ರವಿಸುವ ನಿರ್ಣಯವನ್ನು ಅಂಗೀಕರಿಸುವಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವೈಫಲ್ಯ ತೀವ್ರ ವಿಷಾದನೀಯ. ಸದಸ್ಯರೊಳಗಿನ ಭಿನ್ನಾಭಿಪ್ರಾಯ ಭದ್ರತಾ ಮಂಡಳಿಯನ್ನು ನಿಷ್ಕ್ರಿಯಗೊಳಿಸಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ರವಿವಾರ ಹೇಳಿದ್ದಾರೆ.
ದುಬೈಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆ(ಸಿಒಪಿ28)ಯಲ್ಲಿ ಮಾತನಾಡಿದ ಗುಟೆರಸ್ ‘ಗಾಝಾ ಸಂಘರ್ಷಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತಡವಾಗಿ ಪ್ರತಿಕ್ರಿುಸಿರುವುದು ಅದರ ಅಧಿಕಾರ ಮತ್ತು ವಿಶ್ವಾಸಾರ್ಹತೆಯನ್ನು ತೀವ್ರವಾಗಿ ದುರ್ಬಲಗೊಳಿಸಿದೆ. ಮಾನವೀಯ ಕದನವಿರಾಮ ಘೋಸಬೇಕೆಂಬ ನನ್ನ ಮನವಿಯನ್ನು ಪುನರುಚ್ಚರಿಸುತ್ತಿದ್ದೇನೆ. ಆದರೆ ಭದ್ರತಾ ಮಂಡಳಿ ಇದಕ್ಕೆ ವಿಫಲವಾಗಿದೆ. ಆದರೆ ನಾನು ನನ್ನ ಪ್ರಯತ್ನವನ್ನು ಬಿಡುವುದಿಲ್ಲ. ಗಾಝಾದಲ್ಲಿ ಮಾನವೀಯ ವ್ಯವಸ್ಥೆಯ ತೀವ್ರ ಕುಸಿತದ ಅಪಾಯ ಎದುರಾಗಿದೆ. ಅಲ್ಲಿನ ಪರಿಸ್ಥಿತಿ ದುರಂತವಾಗಿ ಬದಲಾಗುತ್ತಿದೆ’ ಎಂದರು.
ಈ ಮಧ್ಯೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಗಾಝಾ ಪಟ್ಟಿಯಲ್ಲಿ ಆರೋಗ್ಯ ವ್ಯವಸ್ಥೆಯ ಮೇಲೆ ದುರಂತದ ಪರಿಣಾಮ ಬೀರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಫೆಲೆಸ್ತೀನ್ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಚರ್ಚಿಸಲು ರವಿವಾರ ವಿಶ್ವ ಆರೋಗ್ಯಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಗಾಝಾದಲ್ಲಿ ಸಂಘರ್ಷದ ಕಾರಣ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ವೈದ್ಯರು ತಮ್ಮ ಕಾರ್ಯನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಸಣ್ಣ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಸ್ಥಳಾಂತರಗೊಳ್ಳುವುದು, ಸೂಕ್ತ ನೀರು, ಆಹಾರ, ಆಶ್ರಯ ವ್ಯವಸ್ಥೆ, ನೈರ್ಮಲ್ಯ ವ್ಯವಸ್ಥೆಯ ಕೊರತೆಯು ರೋಗ ಹರಡಲು ಸೂಕ್ತ ಸ್ಥಿತಿಯನ್ನು ನಿರ್ವಿುಸುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಗಾಝಾ ಪ್ರದೇಶದಲ್ಲಿನ 36 ಆಸ್ಪತ್ರೆಗಳಲ್ಲಿ ಕೇವಲ 14 ಮಾತ್ರ ಕಾರ್ಯನಿರ್ವಹಿಸುತ್ತಿದೆ ಮತ್ತು ಉತ್ತರ ಗಾಝಾದಲ್ಲಿ ಕೇವಲ 2 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಔಷಧಗಳ ಕೊರತೆ ಎದುರಾಗಿದೆ ಎಂದವರು ಹೇಳಿದ್ದಾರೆ.







