ಅಮೆರಿಕ ವೀಸಾ ವಂಚನೆ ಸಂಚು : 10 ಭಾರತೀಯರ ವಿರುದ್ಧ ದೋಷಾರೋಪಣೆ

ಸಾಂದರ್ಭಿಕ ಚಿತ್ರ | Photo Credit : freepik
ಬೋಸ್ಟನ್, ಎ.11: ಅಂಗಡಿಗಳಲ್ಲಿ ನಕಲಿ ಶಸ್ತ್ರಸಜ್ಜಿತ ದರೋಡೆಗಳನ್ನು ನಡೆಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬೋಸ್ಟನ್ ನ ಫೆಡರಲ್ ಗ್ರ್ಯಾಂಡ್ ಜ್ಯೂರಿ 10 ಭಾರತೀಯ ಪ್ರಜೆಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಈ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತರು ವಲಸೆ ಅರ್ಜಿಗಳಲ್ಲಿ ತಾವು ಅಪರಾಧ ಸಂತ್ರಸ್ತರೆಂದು ಸುಳ್ಳು ಹೇಳಿಕೆಗಳನ್ನು ದಾಖಲಿಸಲು ಅನುಕೂಲ ಕಲ್ಪಿಸುವುದು ಈ ಸಂಚಿನ ಉದ್ದೇಶವಾಗಿತ್ತು. ಮಾ. 2026ರಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿತ್ತು.
ಆರೋಪಿಗಳನ್ನು ಜಿತೇಂದ್ರ ಕುಮಾರ್ ಪಟೇಲ್ (39), ಮಹೇಶಕುಮಾರ್ ಪಟೇಲ್ (36), ಸಂಜಯಕುಮಾರ್ ಪಟೇಲ್ (45), ದೀಪಿಕಾಬೆನ್ ಪಟೇಲ್ (40), ರಮೇಶ್ ಭಾಯಿ ಪಟೇಲ್ (52), ಅಮಿತಾ ಬಹೆನ್ ಪಟೇಲ್ (43), ರೋನಕ್ ಕುಮಾರ್ ಪಟೇಲ್ (28), ಸಂಗೀತಾ ಬೆನ್ ಪಟೇಲ್ (36), ಮಿಂಕೇಶ್ ಪಟೇಲ್ (42) ಮತ್ತು ಸೋನಲ್ ಪಟೇಲ್ (42) ಎಂದು ಹೆಸರಿಸಲಾಗಿದೆ.
ಹೆಚ್ಚಿನ ಆರೋಪಿಗಳು ಅಮೆರಿಕದ ವಿವಿಧೆಡೆಗಳಲ್ಲಿ ಕಾನೂನುಬಾಹಿರವಾಗಿ ವಾಸವಾಗಿದ್ದರೆ, ಒಬ್ಬರನ್ನು ಈಗಾಗಲೇ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ರಮೇಶ್ ಭಾಯಿ ಪಟೇಲ್ ಮತ್ತು ರೋನಕ್ ಕುಮಾರ್ ಪಟೇಲ್ ವಲಸೆ ಇಲಾಖೆಯ ಕಸ್ಟಡಿಯಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಎಲ್ಲ 10 ಆರೋಪಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ, ಬಳಿಕ ಷರತ್ತುಗಳ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ಯು.ಎಸ್. ಅಟಾರ್ನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಆರೋಪಿಗಳು ತಮಗೆ ವಿಧಿಸಲಾದ ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಗಡಿಪಾರು ಮಾಡಲಾಗುತ್ತದೆ.
ಸಂಚಿನ ರೂವಾರಿ ರಾಮಭಾಯಿ ಪಟೇಲ್ ಮತ್ತು ನಕಲಿ ‘ದರೋಡೆಕೋರ’ನಾಗಿ ಪಾತ್ರ ನಿರ್ವಹಿಸುತ್ತಿದ್ದ ಚಾಲಕ ಬಲ್ವಿಂದರ್ ಸಿಂಗ್ ಅವರ ಕುರಿತು ನಡೆಸಿದ ತನಿಖೆಯ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ಈ ಇಬ್ಬರ ವಿರುದ್ಧ ಡಿಸೆಂಬರ್ 2023ರಲ್ಲಿ ಆರೋಪ ಹೊರಿಸಲಾಗಿದ್ದು, ಮೇ 2025ರಲ್ಲಿ ಶಿಕ್ಷೆ ವಿಧಿಸಲಾಗಿದೆ.
ದೋಷಾರೋಪ ಪಟ್ಟಿಯ ಪ್ರಕಾರ, ಮಾರ್ಚ್ 2023ರಲ್ಲಿ ರಾಮ್ ಭಾಯಿ ಪಟೇಲ್ ಮತ್ತು ಆತನ ಸಹವರ್ತಿಗಳು ಮಸಾಚುಸೆಟ್ಸ್ ಮತ್ತು ಇತರೆಡೆಗಳಲ್ಲಿನ ಕನಿಷ್ಠ ಆರು ಮದ್ಯದಂಗಡಿಗಳು ಮತ್ತು ಫಾಸ್ಟ್ಫುಡ್ ರೆಸ್ಟೋರಂಟ್ಗಳಲ್ಲಿ ನಕಲಿ ಶಸ್ತ್ರಸಜ್ಜಿತ ದರೋಡೆಗಳನ್ನು ನಡೆಸಿದ್ದರು. ಅಂಗಡಿಗಳ ಗುಮಾಸ್ತರು ಯು-ವೀಸಾಕ್ಕಾಗಿ ಅರ್ಜಿಗಳಲ್ಲಿ ತಾವು ಹಿಂಸಾತ್ಮಕ ಅಪರಾಧದ ಸಂತ್ರಸ್ತರು ಎಂದು ಸುಳ್ಳು ಹೇಳಿಕೆಗಳನ್ನು ದಾಖಲಿಸಲು ಅನುವು ಮಾಡಿಕೊಡುವುದು ಈ ದರೋಡೆಗಳ ಉದ್ದೇಶವಾಗಿತ್ತು.
ಮಾನಸಿಕ ಅಥವಾ ದೈಹಿಕ ಕಿರುಕುಳಕ್ಕೆ ಒಳಗಾದ ಮತ್ತು ಕ್ರಿಮಿನಲ್ ಚಟುವಟಿಕೆಯ ತನಿಖೆ ಅಥವಾ ವಿಚಾರಣೆಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ನೆರವಾಗುವ ಕೆಲವು ಅಪರಾಧಗಳ ಸಂತ್ರಸ್ತರಿಗೆ ಯು-ವೀಸಾಗಳನ್ನು ನೀಡಲಾಗುತ್ತದೆ.
ನಕಲಿ ದರೋಡೆಗಳ ಸಂದರ್ಭದಲ್ಲಿ ‘ದರೋಡೆಕೋರ’ ಪಿಸ್ತೂಲು ತೋರಿಸಿ ಅಂಗಡಿಗಳ ಗುಮಾಸ್ತರು ಅಥವಾ ಮಾಲಿಕರನ್ನು ಬೆದರಿಸಿ ಹಣವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದನು; ಇದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗುತ್ತಿತ್ತು. ‘ದರೋಡೆಕೋರ’ ಪರಾರಿಯಾದ 5–10 ನಿಮಿಷಗಳ ಬಳಿಕ ಗುಮಾಸ್ತರು ಅಥವಾ ಮಾಲಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿಯನ್ನು ನೀಡುತ್ತಿದ್ದರು.
ಈ ‘ದರೋಡೆ ಯೋಜನೆ’ಗಾಗಿ ಈ ‘ಸಂತ್ರಸ್ತರು’ ರಾಮಭಾಯಿ ಪಟೇಲ್ಗೆ ಹಣ ನೀಡುತ್ತಿದ್ದರು. ನಂತರ ತಮ್ಮ ಅಂಗಡಿಗಳನ್ನು ‘ದರೋಡೆ’ಗೆ ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಆತ ಮಾಲಿಕರಿಗೆ ಹಣ ಪಾವತಿಸುತ್ತಿದ್ದನು ಎಂದು ಆರೋಪಿಸಲಾಗಿದೆ.







