ಅಮೆರಿಕವು ಗಾಝಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ

Photo: X/@WhiteHouse
ವಾಶಿಂಗ್ಟನ್: 'ಗಾಝಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ' ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿ ಮೂಡಿಸಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಅವರು ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. "ಅಮೆರಿಕವು ಗಾಝಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಅದಕ್ಕೆ ಬೇಕಾದ ಕೆಲಸ ನಾವು ಮಾಡುತ್ತೇವೆ. ಗಾಝಾ ಪಟ್ಟಿಯಲ್ಲಿರುವ ಸ್ಫೋಟಗೊಳ್ಳದ ಎಲ್ಲಾ ಅಪಾಯಕಾರಿ ಬಾಂಬ್ಗಳು, ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸುತ್ತೇವೆ. ನಾಶವಾದ ಕಟ್ಟಡಗಳನ್ನು ತೊಡೆದುಹಾಕುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಆರ್ಥಿಕ ಅಭಿವೃದ್ಧಿಯ ಮೂಲಕ ಅಲ್ಲಿನ ಜನರಿಗೆ ಅನಿಯಮಿತ ಸಂಖ್ಯೆಯ ಉದ್ಯೋಗಗಳು ಮತ್ತು ವಸತಿಗಳನ್ನು ಪೂರೈಸುತ್ತೇವೆ" ಎಂದು ಟ್ರಂಪ್ ಹೇಳಿದ್ದಾರೆ.
“ಪ್ರಸಕ್ತ ಘೋಷಣೆಯಾಗಿರುವ ಕದನ ವಿರಾಮವು 'ಹೆಚ್ಚು ಶಾಶ್ವತ ಶಾಂತಿ'ಯ ಆರಂಭಕ್ಕೆ ಪೂರಕವಾಗಿದೆ. ಈ ಕದನ ವಿರಾಮವು ರಕ್ತಪಾತ ಮತ್ತು ಹತ್ಯೆಯನ್ನು ಒಮ್ಮೆಗೇ ಕೊನೆಗೊಳಿಸುವ ದೊಡ್ಡ ಮತ್ತು ಹೆಚ್ಚು ಶಾಶ್ವತ ಶಾಂತಿಯ ಆರಂಭವಾಗಬಹುದು ಎಂದು ನಾನು ಭಾವಿಸುತ್ತೇನೆ. ಅದೇ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನನ್ನ ಆಡಳಿತವು ವಿಶ್ವಾಸವನ್ನು ಪುನಃಸ್ಥಾಪಿಸಲು ಮತ್ತು ಗಾಝಾದಾದ್ಯಂತ ಅಮೆರಿಕದ ಬಲವನ್ನು ಪುನರ್ನಿರ್ಮಿಸಲು ತ್ವರಿತವಾಗಿ ಕೆಲಸ ಮಾಡುತ್ತಿದೆ," ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದೇ ಸಂದರ್ಭ ಟ್ರಂಪ್ ಅವರು 'ಯೆಹೂದ್ಯ ವಿರೋಧಿ' ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಮತ್ತು ಫೆಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯ ಸಂಸ್ಥೆ (UNRWA) ಯಿಂದ ಅಮೆರಿಕ ಹೊರಹೋಗುತ್ತಿದೆ ಎಂದು ಘೋಷಿಸಿಸುವ ಮೂಲಕ ವಿಶ್ವಸಂಸ್ಥೆಗೆ ಮತ್ತೆ ಆಘಾತ ನೀಡಿದ್ದಾರೆ. ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರ ಗುಂಪು ಹಮಾಸ್ ಜೊತೆ ಸಂಪರ್ಕ ಹೊಂದಿದೆ ಎಂಬ ಆರೋಪದ ನಂತರ, ಫೆಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯ ಸಂಸ್ಥೆ (UNRWA)ಯು ಹಿಂದೆ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ತಮ್ಮ ಪ್ರಕಟಣೆಗಳಲ್ಲಿ, ಟ್ರಂಪ್ ಇರಾನ್ ಬಗ್ಗೆಯೂ ಟೀಕೆ ಮಾಡಿದ್ದಾರೆ.







