ಅಮೆರಿಕದಲ್ಲಿ ಗಂಡು, ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಾಗುವುದು: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಘೋಷಿಸಿದ ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಲಿಂಗ ವೈವಿಧ್ಯತೆಯನ್ನು ಕೊನೆಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಶೀಘ್ರದಲ್ಲೇ ಸಹಿ ಹಾಕುವುದಾಗಿ ಘೋಷಿಸಿದ್ದಾರೆ. ಅಮೆರಿಕದ ಫೆಡರಲ್ ಸರ್ಕಾರವು ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಡೊನಾಲ್ಡ್ ಟ್ರಂಪ್, ಇನ್ನು ಮುಂದೆ ಅಮೆರಿಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಾಗುತ್ತದೆ. ಇದು ನಮ್ಮ ಸರ್ಕಾರದ ಅಧಿಕೃತ ನೀತಿಯಾಗಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳು ರಾಜಕೀಯ ವಿಷಯವಾಗಿದೆ. ಕಳೆದ ಚುನಾವಣಾ ಪ್ರಚಾರದಲ್ಲಿ ಅನೇಕ ರಿಪಬ್ಲಿಕನ್ನರು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಂಬಂಧಿಸಿದ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಮಾತನಾಡಿದ್ದರು. ಕ್ರೀಡೆಗಳಲ್ಲಿ ಲಿಂಗತ್ವ ಅಲ್ಪ ಸಂಖ್ಯಾತ ಮಹಿಳೆಯರು ಭಾಗವಹಿಸುವುದಕ್ಕೆ ವಿರೋಧಿಸಿದ್ದರು.
ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನದ ಮೊದಲು ರ್ಯಾಲಿಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಎಲ್ಲಾ ಪುರುಷರನ್ನು ಮಹಿಳಾ ಕ್ರೀಡೆಗಳಿಂದ ದೂರವಿಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಲಿಂಗ ವೈವಿಧ್ಯತೆಯ ಕುರಿತು ಟ್ರಂಪ್ ಅವರ ಹೇಳಿಕೆಯು ಅವರ ಹಿಂದಿನ ಕ್ರಮಗಳಿಗೆ ಹೊಂದಿಕೆಯಾಗುತ್ತದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ತಮ್ಮ ಮೊದಲ ಅವಧಿಯಲ್ಲಿ ಮಿಲಿಟರಿಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಅವಕಾಶ ನಿರಾಕರಿಸಿದ್ದರು.







