ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಭಾರತದೊಂದಿಗಿದೆ: ಭಾರತೀಯ ನಿಯೋಗಕ್ಕೆ ಅಭಯ ನೀಡಿದ ಅಮೆರಿಕ ರಾಜ್ಯ ಉಪ ಕಾರ್ಯದರ್ಶಿ

Credit: X/@DeputySecState
ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದೊಂದಿಗೆ ಅಮೆರಿಕ ಪ್ರಬಲವಾಗಿ ನಿಲ್ಲಲಿದೆ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಭಾರತದ ನಿಲುವನ್ನು ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದಲ್ಲಿ ಅಮೆರಿಕಕ್ಕೆ ತೆರಳಿರುವ ಭಾರತೀಯ ಸರ್ವಪಕ್ಷಗಳ ನಿಯೋಗಕ್ಕೆ ಅಮೆರಿಕ ರಾಜ್ಯ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲಾಂಡೌ ಅಭಯ ನೀಡಿದ್ದಾರೆ.
ಎಪ್ರಿಲ್ 22ರಂದು 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆದಿದ್ದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಕುರಿತು ಮನವರಿಕೆ ಮಾಡಿಕೊಡಲು ವಿವಿಧ ದೇಶಗಳಿಗೆ ಪ್ರವಾಸ ಕೈಗೊಂಡಿರುವ ಭಾರತೀಯ ಸರ್ವಪಕ್ಷಗಳ ನಿಯೋಗವು ತನ್ನ ಮಹತ್ವದ ಅಮೆರಿಕ ಭೇಟಿಯಲ್ಲಿ ಶುಕ್ರವಾರ ಲಾಂಡೌರನ್ನು ಭೇಟಿಯಾಗಿ, ಮಾತುಕತೆ ನಡೆಸಿತು.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಕಚೇರಿ, "ಶಶಿ ತರೂರ್ ನೇತೃತ್ವದ ಸರ್ವಪಕ್ಷಗಳ ನಿಯೋಗವು ಅಮೆರಿಕ ರಾಜ್ಯ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲಾಂಡೌರೊಂದಿಗೆ ಆತ್ಮೀಯ ಹಾಗೂ ಗೋಪ್ಯ ಮಾತುಕತೆ ನಡೆಸಿತು. ಈ ಭಾರತೀಯ ನಿಯೋಗವು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿನ ದೌರ್ಜನ್ಯ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಅವರಿಗೆ ವಿವರಿಸಿತು" ಎಂದು ಹೇಳಿದೆ.
ಈ ಸಂಬಂಧ ಲಾಂಡೌ ಕೂಡಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ಭಾರತೀಯ ಸಂಸತ್ ಪ್ರತಿನಿಧಿಗಳೊಂದಿಗಿನ ಭೇಟಿ ಅದ್ಭುತವಾಗಿತ್ತು. ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದೊಂದಿಗೆ ಅಮೆರಿಕ ಪ್ರಬಲವಾಗಿ ನಿಲ್ಲಲಿದೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡಿದೆ. ಎರಡೂ ದೇಶಗಳ ಪ್ರಗತಿ ಹಾಗೂ ಸಮೃದ್ಧಿಯನ್ನು ಪೋಷಿಸಲು ವ್ಯಾಪಾರ ಮತ್ತು ವಾಣಿಜ್ಯ ಬಾಂಧವ್ಯಗಳು ಸೇರಿದಂತೆ ಅಮೆರಿಕ-ಭಾರತದ ನಡುವಿನ ವ್ಯೂಹಾತ್ಮಕ ಸಂಬಂಧಗಳ ಕುರಿತು ನಾವು ಚರ್ಚಿಸಿದೆವು" ಎಂದು ತಿಳಿಸಿದ್ದಾರೆ.







