ವಿರಳ ಖನಿಜಗಳ ಸಂಗ್ರಹಕ್ಕಾಗಿ 12 ಶತಕೋಟಿ ಡಾಲರ್ ನಿಧಿ ಮೀಸಲಿಟ್ಟ ಅಮೆರಿಕ

Photo : Meta AI
ವಾಶಿಂಗ್ಟನ್, ಫೆ.3: ಅತ್ಯಂತ ವಿರಳವಾಗಿ ಲಭ್ಯವಿರುವ ಖನಿಜಗಳನ್ನು ವ್ಯೂಹಾತ್ಮಕವಾಗಿ ಸಂಗ್ರಹಿಸಿಡುವುದಕ್ಕಾಗಿ ಟ್ರಂಪ್ ಆಡಳಿತವು ಸುಮಾರು 12 ಶತಕೋಟಿ ಡಾಲರ್ ಹಣವನ್ನು ಮೀಸಲಿಡಲಿದೆ. ವಿರಳ ಖನಿಜ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯಕ್ಕೆ ಪ್ರತಿಸ್ಪರ್ಧೆ ಒಡ್ಡುವ ಉದ್ದೇಶದಿಂದ ಟ್ರಂಪ್ ಆಡಳಿತ ಈ ನಡೆಯನ್ನಿರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ಪ್ರಾಜೆಕ್ಟ್ ವಾಲ್ಟ್’ ಎಂದು ಹೆಸರಿಡಲಾದ ಈ ಯೋಜನೆಗೆ ಆರಂಭಿಕವಾಗಿ ಅಮೆರಿಕದ ಆಮದು-ರಫ್ತು ಬ್ಯಾಂಕ್ ನಿಂದ 10 ಶತಕೋಟಿ ಡಾಲರ್ ಸಾಲದ ಮೂಲಕ ನೆರವು ನೀಡಲಾಗುವುದು.
ಈ ಸಂಗ್ರಹದಲ್ಲಿ ಇರಿಸಲಾಗುವ ವಿರಳ ಖನಿಜಗಳು ಪೂರೈಕೆ ಸರಪಣಿಯಲ್ಲಿ ವ್ಯತ್ಯಯಗಳು ಉಂಟಾದಾಗ ಆಟೋಮೊಬೈಲ್, ಇಲೆಕ್ಟ್ರಾನಿಕ್ಸ್ ಹಾಗೂ ಮತ್ತಿತರ ವಲಯಗಳ ಉತ್ಪಾದಕರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಈ ಮೀಸಲು ಸಂಗ್ರಹ ನೆರವಾಗಲಿದೆ ಎಂದು ಅವು ತಿಳಿಸಿವೆ.
ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಶೇ.50ಕ್ಕಿಂತಲೂ ಅಧಿಕ ಸುಂಕ ಹೇರಿದ ಸಂದರ್ಭ ಚೀನಾ ಸರ್ಕಾರವು ಅಮೆರಿಕದಲ್ಲಿ ಜೆಟ್ ಎಂಜಿನ್ ಗಳು, ರಾಡಾರ್ ವ್ಯವಸ್ಥೆಗಳು, ಇಲೆಕ್ಟ್ರಿಕ್ ವಾಹನಗಳು, ಲ್ಯಾಪ್ ಟಾಪ್ ಗಳು ಹಾಗೂ ಫೋನ್ ಗಳ ಉತ್ಪಾದನೆಗೆ ಬೇಕಾದ ವಿರಳ ಖನಿಜಗಳ ರಫ್ತನ್ನು ನಿಬಂಧಿಸಿತ್ತು.
ಜಗತ್ತಿನಲ್ಲಿ ಲಭ್ಯವಿರುವ ವಿರಳ ಖನಿಜಗಳ ಪೈಕಿ ಶೇ.70ರಷ್ಟು ಚೀನಾದ ಬಳಿಯಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಶೇ.90ರಷ್ಟು ವಿರಳ ಖನಿಜಗಳ ಪರಿಷ್ಕರಣೆಯನ್ನು ಚೀನಾವೇ ನಡೆಸುತ್ತಿದೆ.







