ಭಾರತದಿಂದ ಅಲ್ಪಸಂಖ್ಯಾತರ ‘ಅಂತರರಾಷ್ಟ್ರೀಯ ದಮನ’ ಆತಂಕವನ್ನುಂಟು ಮಾಡಿದೆ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ

ಹೊಸದಿಲ್ಲಿ: ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಭಾರತದ ‘ಅಂತರರಾಷ್ಟ್ರೀಯ ದಮನ’ವು ತನಗೆ ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮತ್ತು ಇನ್ನೋರ್ವ ಸಿಖ್ ಪ್ರತ್ಯೇಕತಾವಾದಿ ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚಿನ ಕುರಿತು ಆರೋಪಗಳನ್ನು ಉಲ್ಲೇಖಿಸಿ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಹೇಳಿದೆ.
ಸ್ವತಂತ್ರ ಸರಕಾರಿ ಸಂಸ್ಥೆಯಾಗಿರುವ ಆಯೋಗವು ಧಾರ್ಮಿಕ ಸ್ವಾತಂತ್ರ್ಯದ ಜಾಗತಿಕ ಹಕ್ಕುಗಳ ಮೇಲೆ ನಿಗಾಯಿರಿಸುತ್ತದೆ ಮತ್ತು ಶ್ವೇತಭವನಕ್ಕೆ ನೀತಿ ಸಲಹೆಗಳನ್ನು ನೀಡುತ್ತದೆ. ಆಯೋಗದ ಸಲಹೆಗಳ ಪಾಲನೆ ಕಡ್ಡಾಯವಲ್ಲ.
ಭಾರತವನ್ನು ವಿಶೇಷ ಕಾಳಜಿಯ ದೇಶ ಎಂದು ಘೋಷಿಸುವಂತೆ ಆಯೋಗವು ಶುಕ್ರವಾರ ಅಮೆರಿಕದ ವಿದೇಶಾಂಗ ಇಲಾಖೆಯನ್ನು ಆಗ್ರಹಿಸಿದೆ. ಅದು 2020ರಿಂದಲೂ ತನ್ನ ವಾರ್ಷಿಕ ವರದಿಗಳಲ್ಲಿ ಈ ಶಿಫಾರಸನ್ನು ಮಾಡುತ್ತಲೇ ಬಂದಿದೆ.
ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರವು ಭಾಗಿಯಾಗಿತ್ತು ಎಂಬ ಆರೋಪ ಮತ್ತು ಅಮೆರಿಕದಲ್ಲಿ ಗುರುಪಂತ್ ಸಿಂಗ್ ಪನ್ನೂನ್ ಹತ್ಯೆಗೆ ಒಳಸಂಚು ತೀವ್ರ ಆತಂಕಕಾರಿಯಾಗಿದೆ. ಇದು ತನ್ನ ದೇಶದಲ್ಲಿ ಮತ್ತು ವಿದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕುಗಳ ಸಮರ್ಥಕರ ಧ್ವನಿಯನ್ನಡಗಿಸಲು ಭಾರತದ ಪ್ರಯತ್ನಗಳು ತೀವ್ರಗೊಂಡಿವೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಆಯೋಗದ ಕಮಿಷನರ್ ಸ್ಟೀವನ್ ಶ್ನೆಕ್ ಹೇಳಿದ್ದಾರೆ.







