ನ್ಯೂಯಾರ್ಕ್ ನ ಶಾಲೆಗಳಲ್ಲಿ 8ನೇ ತರಗತಿಯವರೆಗೆ ಮಕ್ಕಳಿಗೆ AI ಬಳಕೆ ನಿಷೇಧ

ಸಾಂದರ್ಭಿಕ ಚಿತ್ರ | Photo Credit : magnific.com
ನ್ಯೂಯಾರ್ಕ್, ಸೆ. 2: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎಂಟನೇ ತರಗತಿಯವರೆಗೆ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ನ್ಯೂಯಾರ್ಕ್ ನಗರ ನಿಷೇಧಿಸಲಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆಯ ವರದಿಯೊಂದು ತಿಳಿಸಿದೆ. ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಾನಿಯಾಗಲಿದೆ ಹಾಗೂ ಪರಿಸರಕ್ಕೂ ಧಕ್ಕೆಯುಂಟುಮಾಡಲಿದೆ ಎಂದು ಶಿಕ್ಷಕರು ಹಾಗೂ ಪೋಷಕರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಗರಾಡಳಿತ ಈ ನಿರ್ಧಾರವನ್ನು ಕೈಗೊಂಡಿದೆ.
9ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಶಿಕ್ಷಣವನ್ನು ನೀಡಲಾಗುವುದೆಂದು ಮೂಲಗಳು ತಿಳಿಸಿವೆ. ಆಗಲೂ ಕೂಡ ನಿರ್ದಿಷ್ಟ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ AI ಬಳಕೆಯನ್ನು ಸೀಮಿತಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಆದರೆ, ಈ ನಿಯಮಗಳು ಪಠ್ಯಗಳ ಬೋಧನೆಗೆ ಪೂರ್ವಸಿದ್ಧತೆಗಾಗಿ ಅಥವಾ ಸಂದೇಶಗಳನ್ನು ಬರೆಯುವಂತಹ ಕೆಲಸಗಳಿಗಾಗಿ AI ಅನ್ನು ಬಳಸಿಕೊಳ್ಳುವುದಕ್ಕೆ ಶಿಕ್ಷಕರಿಗೆ ಅನುಮತಿ ನೀಡಿವೆ. ನೂತನ ಕಾನೂನುಗಳನ್ನು ಬುಧವಾರ (ಅಮೆರಿಕ ಕಾಲಮಾನ) ಪ್ರಕಟಿಸಲಾಗುವುದು ಎಂದು ‘ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ಇದೇ ವೇಳೆ, ಆರರಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳು ತರಗತಿಯಲ್ಲಿ ಕಂಪ್ಯೂಟರ್ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು 45 ನಿಮಿಷಗಳಿಗೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 30 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ.






