ಇರಾನ್‌ನಲ್ಲಿ ಸಿಲುಕಿದ ಉತ್ತರಪ್ರದೇಶದ ಕುಟುಂಬ; ಸುರಕ್ಷಿತ ವಾಪಾಸಾತಿಗೆ ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹ
ಬಲಿಯಾ: ಇರಾನ್ ನಿಂದ ಸುರಕ್ಷಿತವಾಗಿ ವಾಪಾಸಾಗಲು ಕೇಂದ್ರ ಸರಕಾರ ಮಧ್ಯಪ್ರವೇಶಿಸುವಂತೆ ಉತ್ತರಪ್ರದೇಶದ ಕುಟುಂಬವೊಂದು ರವಿವಾರ ಮನವಿ ಮಾಡಿದೆ.
ಇರಾನ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಉಲ್ಬಣಗೊಳ್ಳುತ್ತಿರುವ ನಡುವೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ರಾಸ್ರಾ ಪಟ್ಟಣದ ಒಂದೇ ಕುಟಂಬದ ಸೈಯದ್ ಅಸದ್ ಅಲಿ ಬಕರ್, ಸೈಯದ್ ಮುಹಮ್ಮದ್ ಮುಝ್ತಬಾ ಹುಸೈನ್, ಸೈಯದ್ ಮುಹಮ್ಮದ್, ಶಮಾ ಜಹಾನ್ ಹಾಗೂ ಸೈಯದ್ ನಝ್‌ಮುಸ್ಕಿಬ್ ತೆಹರಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇವರು ಯಾತ್ರಾರ್ಥಿಗಳಾಗಿ ಇರಾಕ್ ಗೆ ತೆರಳಿದ್ದರು.
‘‘ಮೇ 25ರಂದು ಇರಾಕ್ ಗೆ ಯಾತ್ರಾರ್ಥಿಗಳಾಗಿ ಭೇಟಿ ನೀಡಿದ ಬಳಿಕ ತನ್ನ ಕುಟುಂಬದ ಸದಸ್ಯರು ಇರಾನ್ ತಲುಪಿದ್ದಾರೆ. ಪ್ರಸಕ್ತ ಎಲ್ಲರೂ ಟೆಹರಾನ್‌ನ ಹೊಟೇಲೊಂದರಲ್ಲಿ ಸುರಕ್ಷಿತವಾಗಿ ಇದ್ದಾರೆ’’ ಎಂದು ರಾಸ್ರಾದ ನಿವಾಸಿ ಆಸಿಫ್ ತಿಳಿಸಿದ್ದಾರೆ.
‘‘ಇನ್ನೋರ್ವ ಸ್ಥಳೀಯ ಮಸಿಯುರ್ ರೆಹ್ಮಾನ್ ಕೂಡ ಅವರೊಂದಿಗೆ ಇರಾಕ್‌ಗೆ ತೆರಳಿದ್ದರು. ಆದರೆ, ಅವರು ಜೂನ್ 7ರಂದು ಭಾರತಕ್ಕೆ ಹಿಂದಿರುಗಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಬಲಿಯಾ ಸಂಸದ ಸನಾತನ್ ಪಾಂಡೆ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದು ಟೆಹರಾನ್ ನಲ್ಲಿ ಸಿಲುಕಿದ ರಾಸ್ರಾ ಪಟ್ಟಣದ ಐವರು ಸುರಕ್ಷಿತವಾಗಿ ಹಿಂದಿರುಗಲು ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ವಿಮಾನ ಸೇವೆ ಸ್ಥಗಿತಗೊಂಡಿರುವುದರಿಂದ ಅವರು ಭಾರತಕ್ಕೆ ಮರಳುವ ಸಾಧ್ಯತೆ ಇಲ್ಲ ಎಂದು ಸನಾತನ್ ಪಾಂಡೆ ತಿಳಿಸಿದ್ದಾರೆ.







