Uttar Pradesh | ಪ್ರೇಮಸಂಬಂಧದಲ್ಲಿ ಬಿರುಕು: ಯುವತಿಗೆ ಬೆಂಕಿ ಹಚ್ಚಿದ ಪ್ರಿಯಕರನ ಕುಟುಂಬ

Photo: x.com/AnbNewstv
ಮೀರಠ್: ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರ ಮತ್ತು ಆತನ ಕುಟುಂಬದವರು 21 ವರ್ಷ ವಯಸ್ಸಿನ ಯುವತಿಯನ್ನು ಬೆಂಕಿ ಹಚ್ಚಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಏಪ್ರಿಲ್ 29ರಂದು ಸಜೀವ ದಹನ ಯತ್ನ ನಡೆದಿದ್ದು, ಶೇಕಡ 90ರಷ್ಟು ಸುಟ್ಟಗಾಯಗಳೊಂದಿಗೆ ದೆಹಲಿಯ ಸಪ್ಧರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಶನಿವಾರ ಕೊನೆಯುಸಿರೆಳೆದಿದ್ದಾಗಿ ಪೊಲೀಸರು ಹೇಳಿದ್ದಾರೆ.
ಮೀರಠ್ ನ ಶಿಕಾರ್ಪುರ ಮಾರುತಿ ವಿಹಾರದ ನಿವಾಸಿ ಕಾಶಿಶ್ ಮೀನಾ ಎಂಬ ಯುವತಿ ಅದೇ ಗ್ರಾಮದ 24 ವರ್ಷ ವಯಸ್ಸಿನ ಕೂಲಿಕಾರ್ಮಿಕ ಆಶೀಶ್ ಮೀನಾ (24) ಎಂಬ ಯುವಕನ ಜತೆ ಮೂರು ವರ್ಷಗಳಿಂದ ಪ್ರೇಮಸಂಬಂಧ ಹೊಂದಿದ್ದಳು. ಎರಡೂ ಕುಟುಂಬಗಳಿಗೆ ಇದರ ಅರಿವಿತ್ತು ಹಾಗೂ ವಿವಾಹಕ್ಕೆ ಸಮ್ಮತಿಸಿದ್ದರು. ಆದರೆ ಈ ಮಧ್ಯೆ ಬೇರೆ ಯುವತಿಯ ಜತೆ ನಿಶ್ಚಿತಾರ್ಥ ಮುಗಿದಿರುವುದಾಗಿ ಆಶೀಶ್ ಹೇಳಿದ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಸಂಬಂಧ ಹಳಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಕಾಶಿಶ್ ಯುವಕನ ಜತೆ ಜಗಳವಾಡಿದ್ದು, ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ ಆಶೀಶ್ ಕುಟುಂಬದವರು ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಶಿಕಾರ್ಪುರ ಸಿಎಚ್ಸಿಗೆ ಆಕೆಯನ್ನು ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ, ಬಳಿಕ ದೇಹಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ದಾಖಲಿಸಲಾಯಿತು. ಶೇಕಡ 90ರಷ್ಟು ಸುಟ್ಟಗಾಯಗಳಾಗಿದ್ದವು. ಬಳಿಕ ದೆಹಲಿಯ ಸಪ್ಧರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಬಲೂಂದರ್ ಶಹರ್ ಜಿಲ್ಲಾ ಆಸ್ಪತ್ರೆ ವೈದ್ಯರು ಹೇಳಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಶಿಕಾರಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಬಲೂಂದರ್ ಶಹರ್ ಆಸ್ಪತ್ರೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಕಾಶಿಶ್ ಹೇಳಿಕೆ ನೀಡಿದ್ದಳು. ಇದನ್ನು ದಾಖಲಿಸಿಕೊಂಡು ರಹಸ್ಯವಾಗಿ ಇಡಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ವಿವರಿಸಿದ್ದಾರೆ.






