Venezuela | ಮಡುರೊ ಪದಚ್ಯುತಿಗೆ ಮುನ್ನ ಅಮೆರಿಕದೊಂದಿಗೆ ಡೆಲ್ಸಿ ರೊಡ್ರಿಗಸ್ ರಹಸ್ಯ ಮಾತುಕತೆ: ವರದಿ

Photo : indiatoday
ಕ್ಯಾರಕಾಸ್, ಜ.25: ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಪದಚ್ಯುತಗೊಳಿಸುವ ಮೊದಲು, ದೇಶದ ಮಧ್ಯಂತರ ನಾಯಕತ್ವ ಮತ್ತು ಅಮೆರಿಕದ ಅಧಿಕಾರಿಗಳ ನಡುವೆ ಉನ್ನತ ಮಟ್ಟದ ರಹಸ್ಯ ಮಾತುಕತೆಗಳು ನಡೆದಿದ್ದವು ಎಂದು ಬ್ರಿಟನ್ನ The Guardian ವರದಿ ಮಾಡಿದೆ.
ವರದಿಯ ಪ್ರಕಾರ, ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಹಾಗೂ ಅವರ ಸಹೋದರ, ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಜಾರ್ಜ್ ರೊಡ್ರಿಗಸ್, ಈ ತಿಂಗಳ ಆರಂಭದಲ್ಲಿ ಮಡುರೊ ಅವರನ್ನು ವಶಕ್ಕೆ ಪಡೆಯುವ ಅಮೆರಿಕ ನೇತೃತ್ವದ ಕಾರ್ಯಾಚರಣೆಗೆ ಮುನ್ನ ಟ್ರಂಪ್ ಆಡಳಿತದೊಂದಿಗೆ ಸಹಕರಿಸುವ ಇಚ್ಛೆಯನ್ನು ಅಮೆರಿಕ ಮತ್ತು ಖತರ್ ಅಧಿಕಾರಿಗಳಿಗೆ ಮಧ್ಯವರ್ತಿಗಳ ಮೂಲಕ ವ್ಯಕ್ತಪಡಿಸಿದ್ದರು.
ಜ. 3ರಂದು ಕ್ಯಾರಕಾಸ್ನಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಗೆ ಮುಂಚಿತವಾಗಿಯೇ ಈ ಮಾತುಕತೆಗಳು ನಡೆದಿವೆ ಎಂದು ವರದಿ ಹೇಳಿದೆ. ಮಡುರೊ ಅವರನ್ನು ಸೆರೆಹಿಡಿದ ಎರಡು ದಿನಗಳ ಬಳಿಕ ಡೆಲ್ಸಿ ರೊಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಮಡುರೊ ಅವರ ನಿರ್ಗಮನವನ್ನು ಸ್ವಾಗತಿಸಿದರೂ, ಅವರನ್ನು ನೇರವಾಗಿ ಪದಚ್ಯುತಗೊಳಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸುವುದಕ್ಕೆ ರೊಡ್ರಿಗಸ್ ಸಹೋದರರು ಒಪ್ಪಲಿಲ್ಲ ಎಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ. ಮಡುರೊ ನಂತರ ದೇಶದಲ್ಲಿ ಸ್ಥಿರ ಆಡಳಿತ ಸಹಕಾರಕ್ಕೆ ಮಾತ್ರ ಅವರು ಬೆಂಬಲ ಸೂಚಿಸಿದ್ದರು ಎಂದು ವರದಿ ಹೇಳಿದೆ.
ಡಿಸೆಂಬರ್ ವೇಳೆಗೆ ಡೆಲ್ಸಿ ರೊಡ್ರಿಗಸ್ ಅವರು “ಮಡುರೊ ಹೋಗಬೇಕು” ಎಂಬ ನಿಲುವು ವ್ಯಕ್ತಪಡಿಸಿದ್ದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಂತರದ ಪರಿಣಾಮಗಳು ಏನೇ ಇರಲಿ, ಅವುಗಳೊಂದಿಗೆ ಕೆಲಸ ಮಾಡಲು ಅವರು ಸಿದ್ಧರಾಗಿದ್ದರು” ಎಂದು ಮತ್ತೊಬ್ಬರು ಹೇಳಿದ್ದಾರೆ.
ಆರಂಭದಲ್ಲಿ ಅಮೆರಿಕದ ಆಡಳಿತದೊಳಗೆ ಈ ರೀತಿಯ ಆಂತರಿಕ ನಾಯಕರೊಂದಿಗೆ ತೊಡಗಿಸಿಕೊಳ್ಳುವ ಬಗ್ಗೆ ಸಂಶಯವಿತ್ತು. ಆದರೆ ಮಡುರೊ ಪದಚ್ಯುತಿಯ ನಂತರ ಉಂಟಾಗಬಹುದಾದ ಅಸ್ಥಿರತೆಯನ್ನು ತಪ್ಪಿಸಲು ಡೆಲ್ಸಿ ರೊಡ್ರಿಗಸ್ ಅವರ ಭರವಸೆಗಳು ಸಹಾಯಕವಾಗಬಹುದು ಎಂಬ ಅಭಿಪ್ರಾಯ ಮೂಡಿತ್ತು ಎಂದು ವರದಿ ಹೇಳುತ್ತದೆ.
ಮಡುರೊ ಬಂಧನದ ಕೆಲವೇ ಗಂಟೆಗಳ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕ್ ಪೋಸ್ಟ್ಗೆ, “ನಾವು ಆಕೆಯೊಂದಿಗೆ ಹಲವಾರು ಬಾರಿ ಮಾತನಾಡಿದ್ದೇವೆ. ಆಕೆ ಅರ್ಥಮಾಡಿಕೊಂಡಿದ್ದಾಳೆ” ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ವೆನೆಝುವೆಲಾ ಸರ್ಕಾರವು ಸಾಮಾಜಿಕ ಜಾಲತಾಣ Xನಲ್ಲಿ ಇಂತಹ ಸಹಕಾರದ ವರದಿಗಳನ್ನು “ಸುಳ್ಳು” ಎಂದು ತಳ್ಳಿಹಾಕಿದೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಇದಕ್ಕೂ ಮುನ್ನ, ಮಡುರೊ ಕೆಳಗಿಳಿದರೆ ಖತರ್ ಮೂಲಕ ಪರಿವರ್ತನಾ ಸರ್ಕಾರವನ್ನು ಮುನ್ನಡೆಸಲು ಸಿದ್ಧತೆ ಇದೆ ಎಂದು ಡೆಲ್ಸಿ ರೊಡ್ರಿಗಸ್ ಸೂಚಿಸಿದ್ದರೆಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಆ ಪ್ರಸ್ತಾವವನ್ನು ಅಯವಮೆರಿಕವು ಸ್ವೀಕರಿಸಿರಲಿಲ್ಲ.
ಇದಾದ ಬಳಿಕ, ಮಡುರೊ ಅವರನ್ನು ಪದಚ್ಯುತಗೊಳಿಸುವ ಕಾರ್ಯಾಚರಣೆಗೆ ತಿಂಗಳುಗಳ ಮೊದಲು ವೆನೆಝುವೆಲಾದ ಆಂತರಿಕ ಸಚಿವ ಡಿಯೊಸ್ಡಾಡೊ ಕ್ಯಾಬೆಲ್ಲೊ ಕೂಡ ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರೆಂದು ರಾಯಿಟರ್ಸ್ ವರದಿ ಮಾಡಿದೆ.
ಮಡುರೊ ನಂತರ ವೆನೆಝುವೆಲಾ ವಿಫಲ ರಾಷ್ಟ್ರವಾಗದಂತೆ ತಡೆಯುವುದೇ ಅಮೆರಿಕದ ಪ್ರಮುಖ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ. ಡೆಲ್ಸಿ ರೊಡ್ರಿಗಸ್ ಅವರು ಅಮೆರಿಕದ ತೈಲ ಕಂಪೆನಿಗಳೊಂದಿಗೆ ಕೆಲಸ ಮಾಡಲು ಸಿದ್ಧತೆ ನಡೆಸಿದ್ದೂ ಅಮೆರಿಕದ ಕೆಲವು ಅಧಿಕಾರಿಗಳ ಬೆಂಬಲಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಆದರೆ, ಈ ಎಲ್ಲದ ನಡುವೆಯೂ, ರೊಡ್ರಿಗಸ್ ಸಹೋದರರು ಮಡುರೊ ಅವರನ್ನು ಉರುಳಿಸಲು ಪಿತೂರಿ ನಡೆಸಲಿಲ್ಲ ಎಂದು ಮೂಲಗಳು ಒತ್ತಿ ಹೇಳಿವೆ. ಜನವರಿ ಆರಂಭದಲ್ಲಿ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ಗಳು ಕ್ಯಾರಕಾಸ್ ಗೆ ಬಂದಾಗ ಡೆಲ್ಸಿ ರೊಡ್ರಿಗಸ್ ರಾಜಧಾನಿಯಲ್ಲಿ ಇರಲಿಲ್ಲ. ಅವರು ಮಾರ್ಗರಿಟಾ ದ್ವೀಪದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.







