ವೆನೆಝುವೆಲಾ ಮೇಲಿನ ನಿರ್ಬಂಧ ಸಡಿಲಿಸಿದ ಟ್ರಂಪ್: ಅಮೆರಿಕಾ ಸಂಸ್ಥೆಗಳಿಗೆ ತೈಲ ಖರೀದಿಗೆ ಅವಕಾಶ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಜ.30: ವೆನೆಝುವೆಲಾ ತೈಲ ಉದ್ಯಮದ ಮೇಲಿನ ಪ್ರಮುಖ ನಿರ್ಬಂಧವನ್ನು ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ಸಡಿಲಿಸಿದ್ದು ಅಮೆರಿಕನ್ ಸಂಸ್ಥೆಗಳು ವೆನೆಝುವೆಲಾದ ಕಚ್ಛಾ ತೈಲವನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ಸಂಸ್ಕರಿಸಲು ಅವಕಾಶ ನೀಡಿದೆ.
ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣದ ಕಚೇರಿಯು ನೀಡುವ ಲೈಸೆನ್ಸ್ನಲ್ಲಿ ಹೊಸ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿಲ್ಲ. ಇದಕ್ಕೆ ಪ್ರತ್ಯೇಕ ಅನುಮೋದನೆ ಬೇಕಾಗುತ್ತದೆ. ಚೀನಾ, ಇರಾನ್, ಉತ್ತರ ಕೊರಿಯಾ, ಕ್ಯೂಬಾ ಮತ್ತು ರಶ್ಯ ರಾಷ್ಟ್ರಗಳ ವ್ಯಕ್ತಿಗಳು ಮತ್ತು ಸಂಸ್ಥೆಗಳ ಒಳಗೊಳ್ಳುವಿಕೆಯನ್ನು ನಿರ್ಬಂಧಿಸಲಾಗಿದೆ.
2019ರಲ್ಲಿ ವೆನೆಝುವೆಲಾದ ಇಂಧನ ಕ್ಷೇತ್ರದ ಮೇಲೆ ಅಮೆರಿಕಾ ಕಠಿಣ ನಿರ್ಬಂಧ ವಿಧಿಸಿದ ನಂತರ ನಿರ್ಬಂಧ ಸಡಿಲಿಕೆಗೆ ಸಂಬಂಧಿಸಿದ ಪ್ರಮುಖ ಕ್ರಮ ಇದಾಗಿದೆ. ಜನವರಿ 3ರಂದು ಅಮೆರಿಕಾ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ವೆನೆಝುವೆಲಾ ಅಧ್ಯಕ್ಷರನ್ನು ಸೆರೆ ಹಿಡಿದ ನಂತರ ವೆನೆಝುವೆಲಾದ ತೈಲ ಆದಾಯವನ್ನು ಅಮೆರಿಕಾ ನಿಯಂತ್ರಿಸುತ್ತದೆ ಎಂದು ಟ್ರಂಪ್ ಘೋಷಿಸಿದ್ದರು.





