Venezuela ವಿಪಕ್ಷ ನಾಯಕಿ ಮರಿಯಾ ಕೊರಿನಾ ನನಗೆ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬಹುದು: ಡೊನಾಲ್ಡ್ ಟ್ರಂಪ್

photo: indiatimes
ವಾಷಿಂಗ್ಟನ್: ವೆನಿಝುವೆಲಾ ವಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾಡೊ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಂಚಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಟ್ರಂಪ್ ಸುಳಿವು ನೀಡಿದ್ದಾರೆ. “ನಾವಿಬ್ಬರೂ ಭೇಟಿಯಾದಾಗ, ಮರಿಯಾ ಕೊರಿನಾ ಮಚಾಡೊ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೆ ಹಸ್ತಾಂತರಿಸಬಹುದು” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮುಂದಿನ ವಾರ ವಾಷಿಂಗ್ಟನ್ ನಲ್ಲಿ ಮಚಾಡೊ ಅವರನ್ನು ತಾನು ಭೇಟಿಯಾಗಲಿದ್ದೇನೆ ಎಂದು ಗುರುವಾರ ಡೊನಾಲ್ಡ್ ಟ್ರಂಪ್ ಹೇಳಿದ್ದು, ಈ ವೇಳೆ ಆಕೆ ತನ್ನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೆ ನೀಡಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ದೀರ್ಘಕಾಲದಿಂದ ನೊಬೆಲ್ ಶಾಂತಿ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದಾರೆ.
“ಆಕೆ ಅದನ್ನು ಮಾಡಲು ಬಯಸುತ್ತಿದ್ದಾರೆ ಎಂಬ ಸಂಗತಿ ನನಗೆ ತಿಳಿದಿದೆ. ಅದು ದೊಡ್ಡ ಗೌರವವಾಗಲಿದೆ” ಎಂದು ಫಾಕ್ಸ್ ನ್ಯೂಸ್ ಸುದ್ದಿ ಸಂಸ್ಥೆಯ ನಿರೂಪಕಿ ಸಿಯಾನ್ ಹ್ಯಾನಿಟಿಗೆ ನೀಡಿದ ಸಂದರ್ಶನದಲ್ಲಿ ಮಚಾಡೊ ಅವರನ್ನು ಉಲ್ಲೇಖಿಸಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆದರೆ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ಒಬ್ಬರಿಂದ ಮತ್ತೊಬ್ಬರಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಒಸ್ಲೋದಲ್ಲಿನ ನೊಬೆಲ್ ಸಂಸ್ಥೆ ಸ್ಪಷ್ಟಪಡಿಸಿದೆ. “ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಿಂಪಡೆಯಲಾಗುವುದಿಲ್ಲ ಅಥವಾ ಬೇರೆಯವರಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ” ಎಂದು ನೊಬೆಲ್ ಸಂಸ್ಥೆಯ ವಕ್ತಾರ ಎರಿಕ್ ಆಶೈಮ್ ತಿಳಿಸಿದ್ದಾರೆ.







