ಮಡುರೊ ಜೀವಂತವಾಗಿರುವ ಬಗ್ಗೆ ಪುರಾವೆ ಬೇಕು: ವೆನೆಝುವೆಲ ಉಪಾಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್

Photo Credit : aljazeera.com
ಕ್ಯಾರಕಸ್ (ವೆನೆಝುವೆಲ), ಜ. 3: ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಹಾಗೂ ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ರನ್ನು ಅಮೆರಿಕದ ಪಡೆಗಳು ಸೆರೆಹಿಡಿದ ಬಳಿಕ ಅವರು ಎಲ್ಲಿದ್ದಾರೆ ಎನ್ನುವುದು ಸರಕಾರಕ್ಕೆ ತಿಳಿದಿಲ್ಲ ಎಂದು ವೆನೆಝುವೆಲದ ಉಪಾಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್ ಶನಿವಾರ ಸರಕಾರಿ ಟಿವಿಯಲ್ಲಿ ಹೇಳಿದ್ದಾರೆ.
‘‘ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ ಎಲ್ಲಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ. ಅವರು ಜೀವಂತವಾಗಿರುವ ಬಗ್ಗೆ ನಮಗೆ ಪುರಾವೆ ಬೇಕು’’ ಎಂದು ಅವರು ಹೇಳಿದರು.
ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿಯಲಾಗಿದೆ ಹಾಗೂ ಅವರನ್ನು ದೇಶದಿಂದ ಹೊರಗೆ ಒಯ್ಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ‘‘ಅಮೆರಿಕವು ವೆನೆಝುವೆಲದ ವಿರುದ್ಧ ಬೃಹತ್ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ’’ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ, 1989ರಲ್ಲಿ ಅಮೆರಿಕದ ಪಡೆಗಳು ಪನಾಮದ ಮೇಲೆ ದಾಳಿ ನಡೆಸಿ ಅದರ ಅಧ್ಯಕ್ಷ ಮ್ಯಾನುಯೆಲ್ ನೊರೀಗರನ್ನು ಪದಚ್ಯುತಗೊಳಿಸಿದ್ದವು. ಆ ಬಳಿಕ, ಅಮೆರಿಕವು ಲ್ಯಾಟಿನ್ ಅಮೆರಿಕ ದೇಶವೊಂದರಲ್ಲಿ ಇಂಥ ನೇರ ಹಸ್ತಕ್ಷೇಪವನ್ನು ಮಾಡಿರಲಿಲ್ಲ.
ಅಮೆರಿಕದ ಸೇನಾ ಆಕ್ರಮಣವನ್ನು ವೆನೆಝುವೆಲ ತಿರಸ್ಕರಿಸಿದೆ ಹಾಗೂ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಮನ್ನು ಘೋಷಿಸಿದೆ.
‘‘ವೆನೆಝುಯೆಲದ ನೆಲ ಮತ್ತು ಜನರ ಮೇಲೆ ಅಮೆರಿಕದ ಹಾಲಿ ಸರಕಾರವು ನಡೆಸಿರುವ ಅತ್ಯಂತ ಗಂಭೀರ ಸೇನಾ ಆಕ್ರಮಣವನ್ನು ವೆನೆಝುಯೆಲ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ’’ ಎಂದು ಅಧ್ಯಕ್ಷ ನಿಕೊಲಸ್ ಮಡುರೊ ಸರಕಾರ ಹೇಳಿದೆ.
ವೆನೆಝುವೆಲದಲ್ಲಿರುವ ಮಾದಕದ್ರವ್ಯ ಜಾಲಗಳ ವಿರುದ್ಧ ಭೂದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರಗಳಿಂದ ಬೆದರಿಕೆ ಹಾಕುತ್ತಿದ್ದರು. ಅವರು ಕೆರಿಬಿಯನ್ ಸಮುದ್ರದಲ್ಲಿ ಅಮೆರಿಕದ ಅತ್ಯಂತ ಸುಧಾರಿತ ವಿಮಾನವಾಹಕ ಯುದ್ಧನೌಕೆ ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಸೇರಿದಂತೆ ಭಾರೀ ಪ್ರಮಾಣದಲ್ಲಿ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳನ್ನು ನಿಯೋಜಿಸಿದ್ದರು.
ಸದ್ದಾಮ್, ಪನಾಮದ ನೊರೀಗ ಸಾಲಿಗೆ ಸೇರ್ಪಡೆಗೊಂಡ ನಿಕೊಲಸ್ ಮಡುರೊ
ಅಮೆರಿಕದ ಪಡೆಗಳು ಶನಿವಾರ ಮುಂಜಾನೆ ಸೇನಾ ಕಾರ್ಯಾಚರಣೆ ನಡೆಸಿ ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಹಾಗೂ ದೇಶದ ಪ್ರಥಮ ಮಹಿಳೆಯನ್ನು ದೇಶದಿಂದ ಹೊರಗೆ ಅಪಹರಿಸಿರುವ ಘಟನೆಯು ಹಿಂದಿನ ಇಂಥದೇ ಘಟನೆಗಳನ್ನು ಕೆದಕಿದೆ.
ಅಮೆರಿಕವು ಈ ಹಿಂದೆ ಇಂಥದೇ ಸೇನಾ ಕಾರ್ಯಾಚರಣೆಗಳನ್ನು ನಡೆಸಿ ಪನಾಮದ ಮಾಜಿ ಸೇನಾ ನಾಯಕ ಮ್ಯಾನುಯೆಲ್ ನೊರೀಗ ಅವರನ್ನು ಪದಚ್ಯುತಗೊಳಿಸಿರುವುದನ್ನು ಮತ್ತು ಇರಾಕ್ ಅಧ್ಯಕ್ಷ ಸದ್ದಾಮ್ ಹುಸೇನ್ರನ್ನು ಹತ್ಯೆಗೈದಿರುವುದನ್ನು ಸ್ಮರಿಸಬಹುದಾಗಿದೆ.
ವೆನೆಝುವೆಲದಂತೆ ಲ್ಯಾಟಿನ್ ಅಮೆರಿಕದ ದೇಶವೇ ಆಗಿರುವ ಪನಾಮದ ಮೇಲೆ 1989ರಲ್ಲಿ ಅಮೆರಿಕದ ಪಡೆಗಳು ಸೇನಾ ದಾಳಿ ನಡೆಸಿ, ಸೇನಾ ನಾಯಕ ಹಾಗೂ ದೇಶದ ಮುಖ್ಯಸ್ಥರಾಗಿದ್ದ ಮ್ಯಾನುಯೆಲ್ ನೊರೀಗರನ್ನು ಪದಚ್ಯುತಗೊಳಿಸಿದ್ದವು. ಪನಾಮದಲ್ಲಿರುವ ಅಮೆರಿಕದ ನಾಗರಿಕರ ರಕ್ಷಣೆಗಾಗಿ ಹಾಗೂ ಅಪ್ರಜಾಸತ್ತಾತ್ಮಕ ವಿಧಾನಗಳು, ಭ್ರಷ್ಟಾಚಾರ ಮತ್ತು ಅಕ್ರಮ ಮಾದಕದ್ರವ್ಯ ದಂಧೆಯನ್ನು ಮಟ್ಟಹಾಕುವುದಕ್ಕಾಗಿ ಈ ಸೇನಾ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿತ್ತು.
ಪನಾಮದ ಮೇಲೆ ದಾಳಿ ನಡೆಸುವ ಮೊದಲು, ಅಮೆರಿಕವು 1988ರಲ್ಲಿ ಮಯಾಮಿಯಲ್ಲಿ ನೊರೀಗ ವಿರುದ್ಧ ಮಾದಕದ್ರವ್ಯ ಕಳ್ಳಸಾಗಣೆಯ ಆರೋಪವನ್ನು ಹೊರಿಸಿತ್ತು. ಅದೇ ತಂತ್ರವನ್ನು ಅಮೆರಿಕವು ವೆನೆಝುವೆಲ ಅಧ್ಯಕ್ಷ ಮಡುರೊ ವಿರುದ್ಧವೂ ಹೂಡಿದೆ.
1985ರಲ್ಲಿ, ಪನಾಮದ ಅಧ್ಯಕ್ಷ ನಿಕೊಲಸ್ ಅರ್ಡಿಟೊ ಬಾರ್ಲೆಟ್ಟ ರಾಜೀನಾಮೆ ನೀಡುವಂತೆ ನೊರೀಗ ಒತ್ತಡ ಹೇರಿದ್ದರು. ಬಳಿಕ, 1989ರಲ್ಲಿ ಚುನಾವಣೆಯನ್ನು ರದ್ದುಗೊಳಿಸಿದ್ದರು. ಅವರು ದೇಶದಲ್ಲಿ ನೆಲೆಸಿದ್ದ ಅಮೆರಿಕ ವಿರೋಧಿ ಭಾವನೆಗಳನ್ನು ಬೆಂಬಲ ನೀಡಿದರು.
ನೊರೀಗ ಆರಂಭದಲ್ಲಿ ಅಮೆರಿಕದ ಮಿತ್ರನಾಗಿದ್ದರು. ಆದರೆ, ನಿಧಾನವಾಗಿ ಅಮೆರಿಕ ವಿರೋಧಿ ನಿಲುವುಗಳನ್ನು ತೆಗೆದುಕೊಂಡರು.
ಅಮೆರಿಕ ಪಡೆಗಳು ನೊರೀಗರನ್ನು ಅಮೆರಿಕಕ್ಕೆ ಒಯ್ದು, ಮಯಾಮಿಯಲ್ಲಿ ಅವರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯಲ್ಲಿ ವಿಚಾರಣೆಗೆ ಒಳಪಡಿಸಿದರು. ಅವರು 2010ರವರೆಗೂ ಅಮೆರಿಕ ಜೈಲಿನಲ್ಲಿದ್ದರು. 2010ರಲ್ಲಿ, ಇನ್ನೊಂದು ಮೊಕದ್ದಮೆಯ ವಿಚಾರಣೆಗಾಗಿ ಅವರನ್ನು ಫ್ರಾನ್ಸ್ಗೆ ಗಡೀಪಾರು ಮಾಡಲಾಯಿತು. ಒಂದು ವರ್ಷದ ಬಳಿಕ, ಫ್ರಾನ್ಸ್ ಅವರನ್ನು ಪನಾಮಕ್ಕೆ ವಾಪಸ್ ಕಳುಹಿಸಿತು. ನೊರೀಗ 2017ರಲ್ಲಿ ಪನಾಮದ ಜೈಲಿನಲ್ಲಿ ನಿಧನರಾದರು.
ಸದ್ದಾಮ್ ಹುಸೇನ್ಗೆ ಗಲ್ಲು
ಇರಾಕ್ನಲ್ಲಿ ಸಾಮೂಹಿಕ ವಿನಾಶಕ ಶಸ್ತ್ರಗಳಿವೆ ಎಂಬ ತಪ್ಪು ಗುಪ್ತಚರ ವರದಿಯ ಆಧಾರದಲ್ಲಿ 2003ರಲ್ಲಿ ಆ ದೇಶದ ಮೇಲೆ ಅಮೆರಿಕ ನೇತೃತ್ವದ ಪಡೆಗಳು ಯುದ್ಧ ನಡೆಸಿದವು. ಯುದ್ಧ ಆರಂಭಗೊಂಡು ಒಂಭತ್ತು ತಿಂಗಳ ಬಳಿಕ, 2003 ಡಿಸೆಂಬರ್ 13ರಂದು ಅಮೆರಿಕದ ಪಡೆಗಳು ಇರಾಕ್ ಅಧ್ಯಕ್ಷ ಸದ್ದಾಮ್ ಹುಸೇನ್ರನ್ನು ಸೆರೆ ಹಿಡಿದವು.
ನೊರೀಗರಂತೆಯೇ, ಸದ್ದಾಮ್ ಹುಸೇನ್ ಕೂಡ ವರ್ಷಗಳ ಕಾಲ ಅಮೆರಿಕದ ಪ್ರಮುಖ ಮಿತ್ರನಾಗಿದ್ದರು.
2003ರ ಯುದ್ಧಕ್ಕೆ ಮುನ್ನ, ಸದ್ದಾಮ್ ಅಲ್-ಖಾಯಿದ ಮುಂತಾದ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದಾಗಿ ಅಮೆರಿಕ ಯಾವುದೇ ಪುರಾವೆ ಇಲ್ಲದೆ ಹೇಳಿಕೊಂಡಿತ್ತು. ಆದರೆ, ಇರಾಕ್ನಲ್ಲಿ ಸಾಮೂಹಿಕ ವಿನಾಶಕ ಅಸ್ತ್ರಗಳು ಯಾವತ್ತೂ ಪತ್ತೆಯಾಗಿಲ್ಲ.
ಸದ್ದಾಮ್ ತನ್ನ ತವರು ಪಟ್ಟಣ ತಿಕ್ರಿತ್ನಲ್ಲಿ ಬಿಲವೊಂದರಲ್ಲಿ ಅಡಗಿರುವುದನ್ನು ಅಮೆರಿಕದ ಸೈನಿಕರು ಪತ್ತೆಹಚ್ಚಿದರು. ಅವರನ್ನು ಇರಾಕ್ನ ನ್ಯಾಯಾಲಯವೊಂದರಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಮಾನವತೆಯ ವಿರುದ್ಧದ ಅಪರಾಧಕ್ಕಾಗಿ ನ್ಯಾಯಾಲಯವು ಅವರಿಗೆ ಮರಣ ದಂಡನೆ ವಿಧಿಸಿತು. 2006 ಡಿಸೆಂಬರ್ 30ರಂದು ಅವರನ್ನು ಗಲ್ಲಿಗೇರಿಸಲಾಯಿತು.
ಹೊಂಡುರಸ್ ಅಧ್ಯಕ್ಷ ಹರ್ನಂಡಿಝ್ಗೆ ಅಮೆರಿಕ ಕ್ಷಮಾದಾನ
ಹೊಂಡುರಸ್ ಅಧ್ಯಕ್ಷ ಹರ್ನಂಡಿಝ್ ಪ್ರಕರಣವು ಅಮೆರಿಕದ ಆಷಾಢಭೂತಿತನವನ್ನು ತೋರಿಸುತ್ತದೆ ಎಂದು ಕೆಲವು ವೀಕ್ಷಕರು ಅಭಿಪ್ರಾಯಪಡುತ್ತಾರೆ.
2022ರ ಫೆಬ್ರವರಿಯಲ್ಲಿ, ಅಮೆರಿಕದ ಏಜಂಟ್ಗಳು ಮತ್ತು ಹೊಂಡುರಸ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹರ್ನಂಡಿಝ್ರನ್ನು ಟೆಗುಸಿಗಲ್ಪದಲ್ಲಿರುವ ಅವರ ಮನೆಯಿಂದ ಸೆರೆಹಿಡಿಯಲಾಯಿತು. ದೇಶದ ಅಧ್ಯಕ್ಷ ಹುದ್ದೆಯನ್ನು ತೊರೆದ ದಿನಗಳ ಬಳಿಕ ಈ ಬೆಳವಣಿಗೆ ನಡೆಯಿತು.
ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಅಕ್ರಮ ಮಾದಕದ್ರವ್ಯ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಲ್ಲಿ ವಿಚಾರಣೆ ಎದುರಿಸಲು ಅವರನ್ನು 2022 ಎಪ್ರಿಲ್ನಲ್ಲಿ ಅಮೆರಿಕಕ್ಕೆ ಗಡೀಪಾರು ಮಾಡಲಾಯಿತು. ಅದೇ ವರ್ಷದ ಜೂನ್ನಲ್ಲಿ ಅವರಿಗೆ 45 ವರ್ಷಗಳ ಜೈಲುವಾಸದ ಶಿಕ್ಷೆಯನ್ನು ವಿಧಿಸಲಾಯಿತು.
ಆದರೆ, 2025 ಡಿಸೆಂಬರ್ ಒಂದರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹರ್ನಂಡಿಝ್ಗೆ ಕ್ಷಮಾದಾನ ನೀಡಿದರು.
ಹರ್ನಂಡಿಝ್ ಅಮೆರಿಕದ ಜೈಲಿನಿಂದ ಹೊರನಡೆದ ಕೆಲವೇ ದಿನಗಳ ಬಳಿಕ, ಅವರ ವಿರುದ್ಧ ಹೊಂಡುರಸ್ನ ಪ್ರಾಸಿಕ್ಯೂಟರ್ ಅಂತರ್ರಾಷ್ಟ್ರೀಯ ಬಂಧನ ವಾರಂಟ್ ಹೊರಡಿಸಿದರು.







